ಸರಿಯಾಗಿ ಒಂದು ಗಂಟೆ ಕಾಲ ಮೋದಿ ಅಬ್ಬರ

| Published : Apr 15 2024, 01:21 AM IST

ಸರಿಯಾಗಿ ಒಂದು ಗಂಟೆ ಕಾಲ ಮೋದಿ ಅಬ್ಬರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ 7.38ಕ್ಕೆ ನಾರಾಯಣಗುರು ವೃತ್ತಕ್ಕೆ ಬಂದಿಳಿದಾಗ ಸಾವಿರಾರು ಅಭಿಮಾನಿಗಳು ಮೋದಿ ಮೋದಿ.. ಎಂಬ ಉದ್ಗಾರ, ಜಯಘೋಷ ಕೂಗಿದರು

ಮಂಗಳೂರು: ಮೈಸೂರಿನಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಸುಮಾರು 7.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿ ಅವರನ್ನು ಬಿಜೆಪಿ ಪದಾಧಿಕಾರಿಗಳು ಬರಮಾಡಿಕೊಂಡರು. ಅಲ್ಲಿಂದ ರಸ್ತೆ ಮಾರ್ಗವಾಗಿ ಕೆಪಿಟಿ ಮೂಲಕ ಕೊಟ್ಟಾರ ಚೌಕಿಯಾಗಿ ನಾರಾಯಣ ಗುರು ವೃತ್ತಕ್ಕೆ ಆಗಮಿಸಿದರು. 7.40ಕ್ಕೆ ರೋಡ್‌ ಶೋ ಆರಂಭ. ನವಭಾರತ್‌ ಸರ್ಕಲ್‌ನಲ್ಲಿ ರೋಡ್‌ ಶೋ ಮುಗಿಯುವಾಗ 8.40 ಗಂಟೆ. ಸರಿಯಾಗಿ ಒಂದು ಗಂಟೆ ಕಾಲ ಮಂಗಳೂರಿನಲ್ಲಿ ರೋಡ್‌ ಶೋ ನಡೆಸಿದ ನರೇಂದ್ರ ಮೋದಿ ರೋಡ್‌ ಶೋ ಮುಗಿದ ಕೂಡಲೆ ರಸ್ತೆ ಮಾರ್ಗವಾಗಿ ಹಂಪನಕಟ್ಟೆ, ಜ್ಯೋತಿ, ನಂತೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಅವರನ್ನು ಬೀಳ್ಕೊಟ್ಟರು. 7.38ಕ್ಕೆ ರೋಡ್‌ಶೋಗೆ ಬಂದಿಳಿದ ಮೋದಿಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ 7.38ಕ್ಕೆ ನಾರಾಯಣಗುರು ವೃತ್ತಕ್ಕೆ ಬಂದಿಳಿದಾಗ ಸಾವಿರಾರು ಅಭಿಮಾನಿಗಳು ಮೋದಿ ಮೋದಿ.. ಎಂಬ ಉದ್ಗಾರ, ಜಯಘೋಷ ಕೂಗಿದರು. ಅಭಿಮಾನಿಗಳಿಗೆ ಕೈಬೀಸಿದ ಮೋದಿ ನೇರವಾಗಿ ನಾರಾಯಣ ಗುರು ವೃತ್ತಕ್ಕೆ ತೆರಳಿ ಗುರುಗಳ ಪ್ರತಿಮೆಗೆ ಹಾರಾರ್ಪಣೆ ಮಾಡಿ ನಮಸ್ಕರಿಸಿ ಗೌರವ ಸಲ್ಲಿಸಿದರು. ಬಳಿಕ ಜನರತ್ತ ಕೈಬೀಸಿದರು. ನರೇಂದ್ರ ಮೋದಿ ಅವರಿಗೆ ಇಬ್ಬರು ಅಭ್ಯರ್ಥಿಗಳಾದ ಕ್ಯಾ.ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್‌ ಕುಮಾರ್‌ ಹಾರ ಹಾಕಿ ರೋಡ್‌ಶೋಗೆ ಸ್ವಾಗತ ಕೋರಿದರು. ಸರಿಯಾಗಿ 7.40ಕ್ಕೆ ರೋಡ್‌ ಶೋ ಜನಸಾಗರದ ಮಧ್ಯೆ ಆರಂಭಗೊಂಡಿತು.

ಚೌಟ- ಕೋಟ ನಡುವೆ ಮೋದಿತೆರೆದ ಅಲಂಕೃತ ವಾಹನದಲ್ಲಿ ಅಭ್ಯರ್ಥಿಗಳಾದ ಕ್ಯಾ.ಬ್ರಿಜೇಶ್‌ ಚೌಟ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಕ್ಕ ಪಕ್ಕದಲ್ಲಿ ನಿಲ್ಲಿಸಿ ನಡುವೆ ನರೇಂದ್ರ ಮೋದಿ ನಿಂತು ರೋಡ್‌ ಶೋ ನಡೆಸಿದರು. ಒಂದು ಕೈಯಲ್ಲಿ ತಾವರೆಯ ಚಿಹ್ನೆಯನ್ನು ತೋರಿಸುತ್ತಾ, ಇನ್ನೊಂದು ಕೈಯಲ್ಲಿ ಜನರೆಡೆಗೆ ಕೈಬೀಸುತ್ತಾ ಸಾಗಿದರು. ರಸ್ತೆಯ ಇಕ್ಕೆಲಗಳಲ್ಲೂ ಸೇರಿದ್ದ ಸಾವಿರಾರು ಅಭಿಮಾನಿಗಳು ಪ್ರಧಾನಿ ಬರುತ್ತಿದ್ದಂತೆ ಹುಚ್ಚೆದ್ದು ಕುಣಿದಾಡಿದರು. ಮಕ್ಕಳು, ಯುವಕರು, ಮಹಿಳೆಯರು, ವೃದ್ಧರಾದಿಯಾಗಿ ಸೇರಿದ್ದ ಜನರು ಮೋದಿಯೆಡೆಗೆ ಹೂವಿನ ಎಸಳುಗಳನ್ನು ತೂರಿ ಸಂಭ್ರಮಿಸಿದರು. ಇದಕ್ಕೆ ಪ್ರತಿಯಾಗಿ ಮೋದಿ ಅವರೂ ಆಗಾಗ ಜನರತ್ತ ಹೂವಿನ ಎಸಳುಗಳನ್ನು ಎರಚಿದರು. ಮಕ್ಕಳನ್ನು ನೋಡಿ ಸಂಭ್ರಮಿಸಿದರು. ರಸ್ತೆಯುದ್ದಕ್ಕೂ ಸೇರಿದ ಜನರು ಕೇಸರಿ ಟೋಪಿ, ಶಾಲು ಹಾಕಿ ಗಮನ ಸೆಳೆದರು. ಇಡೀ ರೋಡ್‌ ಶೋ ಕೇಸರಿಮಯವಾಗಿತ್ತು.

ಹರಿದುಬಂದ ಜನಸಾಗರಮಂಗಳೂರಿನಲ್ಲಿ ಆಯೋಜಿಸಿದ್ದ ಮೋದಿ ರೋಡ್‌ಶೋಗೆ ಕರಾವಳಿಯ ವಿವಿಧೆಡೆಗಳಿಂದ ಜನಸಾಗರವೇ ಹರಿದುಬಂದಿತ್ತು. ಮುಖ್ಯವಾಗಿ ಮಂಗಳೂರು ದಕ್ಷಿಣ, ಉತ್ತರ, ಮೂಡುಬಿದಿರೆಯ ಸಾವಿರಾರು ಮಂದಿ ವಾಹನಗಳಲ್ಲಿ ಆಗಮಿಸಿದ್ದರು. ರಾತ್ರಿ ರೋಡ್‌ ಶೋ ಆಯೋಜಿಸಲಾಗಿದ್ದರೂ, ಸಂಜೆಯಿಂದಲೇ ಜನಸಾಗರ ಹರಿದುಬಂದು ಮೋದಿ ಅವರನ್ನು ನೋಡಲು ಬ್ಯಾರಿಕೇಡ್‌ ಸುತ್ತಲೂ ಜಮಾಯಿಸಿದ್ದರು. ಸಂಜೆ 7 ಗಂಟೆ ವೇಳೆಗೆ ಸಾಗರೋಪಾದಿಯಲ್ಲಿ ಜನರು ಸೇರತೊಡಗಿದ್ದರು.ನೀರು, ಜ್ಯೂಸ್‌, ಮಜ್ಜಿಗೆ

ಸೆಕೆ ವಿಪರೀತ ಹೆಚ್ಚಿರುವ ಮಂಗಳೂರಿನಲ್ಲಿ ಮೋದಿ ರೋಡ್‌ ಶೋಗಾಗಿ ಜನರ ದಾಹ ತಣಿಸಲು ಅಲ್ಲಲ್ಲಿ ನೀರು, ಕಲ್ಲಂಗಡಿ ಜ್ಯೂಸ್‌, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಜನರ ಆರೋಗ್ಯದಲ್ಲಿ ಏನಾದರೂ ಏರುಪೇರು‌ ಆದರೆ ಚಿಕಿತ್ಸೆ ನೀಡಲು ಅಲ್ಲಲ್ಲಿ ಆರೋಗ್ಯ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ರೋಡ್ ಶೋ ಆರಂಭಕ್ಕೂ ಮೊದಲೇ ಮಂತ್ರಘೋಷಗಳ ಜತೆಗೆ ಮೋದಿ, ಬಿಜೆಪಿ ಪರವಾದ ಘೋಷಣೆಗಳು ಸಾರ್ವಜನಿಕರಲ್ಲಿ ಹುಮ್ಮಸ್ಸು ತುಂಬಿಸಿತು.

ಪ್ರಧಾನಿಗೆ ಬಿಗಿ ಭದ್ರತೆರೋಡ್ ಶೋನಲ್ಲಿ ಎಲ್ಲೂ ಅವಘಡ ಸಂಭವಿಸದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಎರಡು ಕಿ.ಮೀ. ಉದ್ದಕ್ಕೂ ರಸ್ತೆಯ ಎರಡು ಕಡೆಯಲ್ಲೂ ಪೂರ್ಣ ರೂಪದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ರಸ್ತೆಯ ಆಚೆಕಡೆ ಒಮ್ಮೆ ಹೋದವರು ಈಚೆ ಕಡೆ ಬರುವಂತಿರಲಿಲ್ಲ. ರೋಡ್‌ ಶೋ ನಡೆಯುವ ಹಾದಿ ಸಂಪೂರ್ಣ ನಿರ್ಜನವಾಗಿತ್ತು. ಬ್ಯಾರಿಕೇಡ್‌ ಉದ್ದಕ್ಕೂ ಕೇಸರಿಮಯವಾಗಿತ್ತು. ಜನಸಂದಣಿಯನ್ನು ನಿಯಂತ್ರಣ ಮಾಡಲು ನೂರಾರು ಪೊಲೀಸರು ಕಾರ್ಯ ನಿರ್ವಹಿಸಿದರು. ಅಗತ್ಯವಿದ್ದ ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು.ಪರದಾಡಿದ ವಾಹನ ಸವಾರರು

ರೋಡ್ ಶೋಗಾಗಿ ಮಂಗಳೂರು ನಗರ ಸಂಚಾರ ಸ್ತಬ್ಧವಾಗಿತ್ತು. ಮುಖ್ಯ ರಸ್ತೆಗಳನ್ನು ಬಂದ್ ಮಾಡುವ ಕುರಿತು ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಮುಖ್ಯ ರಸ್ತೆಗೆ ಜೋಡಿಸುವ ಒಳ ರಸ್ತೆಯನ್ನು ಕೂಡ ಪೊಲೀಸರು ಬಂದ್ ಮಾಡುವ‌‌ ಮೂಲಕ ಅಲ್ಲಲ್ಲಿ ವಾಹನ ಸವಾರರು ಪರದಾಟ ನಡೆಸಿದರು. ರೋಡ್ ಶೋ ಮುಗಿದು ಒಂದು ಗಂಟೆ ಕಳೆದರೂ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಬಳಿಕ ಸುಲಲಿತವಾಯಿತು.

ಹುಲಿ ವೇಷ, ಯಕ್ಷಗಾನ ಮೆರುಗು

ರೋಡ್ ಶೋ ಉದ್ದಕ್ಕೆ ಅಲ್ಲಲ್ಲಿ ಐದಾರು ಸಾಂಸ್ಕೃತಿಕ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಭರತನಾಟ್ಯ, ಹುಲಿವೇಷ ಪ್ರದರ್ಶನ, ಶಂಖ ಜಾಗಟೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ನರೇಂದ್ರ ಮೋದಿ ಆಗಮಿಸುವವರೆಗೂ ಜನರಿಗೆ ಈ ಸಾಂಸ್ಕೃತಿಕ ವೇದಿಕೆಗಳು ಜನರಿಗೆ ಮನರಂಜನೆ ಒದಗಿಸಿದವು.