ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪ್ರಧಾನ ಮಂತ್ರಿ ಪೋಷಣ್ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯ ಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದಾವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ತಿಳಿಸಿದರು.ಬೀದರ ತಾಲೂಕಿನ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಅಡುಗೆ ಸಿಬ್ಬಂದಿಗೆ ಬೀದರ ನಗರದ ಎನ್ಎಫ್ ಪ್ರೌಢ ಶಾಲೆಯಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ, ತನ್ಮೂಲಕ ಅವರ ಕಲಿಕಾ ಸಾಮರ್ಥ್ಯ ಮತ್ತು ಸಾಧನೆ ಹೆಚ್ಚಿಸುವುದಾಗಿದೆ. ಇಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮ ಯಶಸ್ವಿಯಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಬಹುಮುಖ್ಯವಾಗಿದೆ ಎಂದ ಅವರು, ಶಾಲೆಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ಪಿಎಂ ಪೋಷಣ್ ಯೋಜನೆ, ತಾಪಂ ಸಹಾಯಕ ನಿರ್ದೇಶಕ ಝಾಕೀರ ಹುಸೇನ ದೊಡ್ಡಮನಿ ತರಬೇತಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಈಗಾಗಲೇ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಇದು ಮೂರನೇ ತರಬೇತಿಯಾಗಿದೆ. ವೃತ್ತಿ ಸಾಮರ್ಥ್ಯ ಮತ್ತು ಗುಣಮಟ್ಟ ಹೆಚ್ಚಿಸಿಕೊಳ್ಳಲು ಇಲಾಖೆಯಿಂದ ಪ್ರತಿ ವರ್ಷ ಅಡುಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಪಡೆದುಕೊಂಡ ಎಲ್ಲಾ ಅಂಶಗಳು ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರಿಸುವಲ್ಲಿ ಅಳವಡಿಸಿಕೊಂಡು ಮಕ್ಕಳ ಸ್ವಚ್ಛತೆ ಮತ್ತು ಸುರಕ್ಷತೆ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.ಇದೇ ವೇಳೆ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಬೀದರ ತಾಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ, ಅಗ್ನಿ ಶಾಮಕ ಇಲಾಖೆ ಠಾಣಾಧಿಕಾರಿ ಮತ್ತು ಇಂಡಿಯನ್ ಗ್ಯಾಸ್ ಏಜೆನ್ಸಿ ಕ್ಷೇತ್ರ ಸಮನ್ವಯಾಧಿಕಾರಿ ಧನರಾಜ ಗುಡಮೇ, ಎನ್ಎಫ್ ಪ್ರೌಢ ಶಾಲೆ ಮುಖ್ಯಗುರು ಎಡಿಸನ್, ಸಿಆರ್‌ಪಿ ಬಸವರಾಜ, ಮಲ್ಲಿಕಾರ್ಜುನ್ ಮತ್ತು ಮಹೇಶ ದುಪೆ ಹಾಜರಿದ್ದರು.