ಸಾರಾಂಶ
-ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸುವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ
------ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಧಾನಮಂತ್ರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರ ವಿಸ್ತರಿಸಿಕೊಳ್ಳಲು ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕಿರು ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದ್ದು, ಈ ಸೌಲಭ್ಯವನ್ನು ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಈ ಯೋಜನೆಯಡಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿರುವುದು ಸಂತೋಷಕರ ಸಂಗತಿ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯ ಮಿಷನ್, ನಗರಸಭೆ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ( ಪಿಎಂ ಸ್ವನಿಧಿ) ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ( ನಾನು ಕೂಡ ಡಿಜಿಟಲ್) ಅರಿವು ಮೂಡಿಸುವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದರು. ಬೀದಿ ವ್ಯಾಪಾರಿಗಳಿಗೆ ಸಾಂಕೇತಿಕವಾಗಿ ಡಿಜಿಟಲ್ ಗುರುತಿನ ಚೀಟಿ, ಕ್ಯೂ ಆರ್ ಕೋಡ್, ಸಾಲದ ಚೆಕ್ ಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಯಾದಗಿರಿ ಜಿಲ್ಲೆಯು ಶೇ.111 ರಷ್ಟು ಪ್ರಗತಿ ಸಾಧಿಸಿದೆ, ಈ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯದ ಜೊತೆಗೆ ಡಿಜಿಟಲ್ ವ್ಯವಹಾರ ಮಾಡಲು ಕ್ಯೂ ಆರ್ ಕೊಡ್‌ನ್ನು ಉಪಯೋಗಿಸಬೇಕು ಎಂದರು.ಈಗಾಗಲೇ ಜಿಲ್ಲೆಯಲ್ಲಿ ಶೇ.90 ರಷ್ಟು ಬೀದಿ ವ್ಯಾಪಾರಿಗಳು ಕ್ಯೂ ಆರ್ ಕೋಡ್ ಬಳಸುತ್ತಿದ್ದಾರೆ. ಸುಮಾರು ಜನರು ತೆಗೆದುಕೊಂಡ ಸಾಲದ ಮರು ಪಾವತಿ ಸಹ ಆಗುತ್ತಿದೆ ಎಂಬುದು ಗಮನಕ್ಕೆ ಬಂದಿರುತ್ತದೆ. ಜಿಲ್ಲೆಯ ಬೀದಿ ವ್ಯಾಪಾರಿಗಳು ಯಾವುದೇ ಸಂಕಷ್ಟಕ್ಕೆ ಸಿಲುಕಿಕೊಳ್ಳಬಾರದು. ತಾವು ಬೇರೆ ಜಿಲ್ಲೆಗಳಿಗೆ ಮಾದರಿ ಆಗಬೇಕು ಎಂದರು.
ವಿವಿಧ ಇಲಾಖೆಗಳಿಂದ ದೊರೆಯುವ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಪ್ರತಿಯೊಂದು ಬ್ಯಾಂಕಿನಲ್ಲಿ ಸಾಲ ವಿತರಣೆ ಮಾಡುವಾಗ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಗಳ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.ಯೋಜನಾ ನಿರ್ದೇಶಕರು ಹಾಗೂ ಪೌರಾಯುಕ್ತ ಲಕ್ಷ್ಮೀಕಾಂತ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 4364 ರಷ್ಟು ಬೀದಿ ವ್ಯಾಪಾರಿಗಳು ಈಗಾಗಲೇ ಸಾಲ ಸೌಲಭ್ಯ ಪಡೆದುಕೊಂಡಿರುತ್ತಾರೆ. ಅದರಲ್ಲಿ 1224 ರಷ್ಟು ಯಾದಗಿರಿ ನಗರದಲ್ಲಿನ ಬೀದಿ ವ್ಯಾಪಾರಿಗಳು ಇದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರ ಮಾಡುವವರು ಕಡ್ಡಾಯವಾಗಿ ನಗರಸಭೆಯಿಂದ ನೀಡಲಾಗುವ ಗುರುತಿನ ಚೀಟಿಯನ್ನು ತೆಗೆದುಕೊಳ್ಳಬೇಕು ಹಾಗೂ ವಿವಿಧ ಬ್ಯಾಂಕುಗಳಿಂದ ದೊರೆಯುವ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಸಾಲ ವಿತರಣೆಯಲ್ಲಿ ಬ್ಯಾಂಕಿನಿಂದ ತೊಂದರೆಯಾದಲ್ಲಿ ನಗರಸಭೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಭೀಮರಾವ ಪಾಂಚಾಳ ಮಾತನಾಡಿ, ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ವಿತರಿಸಲು ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಈಗಾಗಲೇ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರುಗಳಿಗೆ ನಿರ್ದೇಶನ ನೀಡಲಾಗಿದೆ. ಸಾಲ ಪಡೆದುಕೊಂಡ ಬೀದಿ ವ್ಯಾಪಾರಿಗಳು ತಪ್ಪದೇ ಸಾಲ ಮರು ಪಾವತಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದುಕೊಳ್ಳಬೇಕು ಎಂದರು.ಸಹಾಯಕ ಕಾರ್ಯಪಾಲಕ ಅಭಿಯಂತರ ರಜನಿಕಾಂತ ಮಾತನಾಡಿ, ನಗರದಲ್ಲಿ ಬೀದಿ ವ್ಯಾಪಾರಿಗಳು ವ್ಯಾಪಾರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು ಹಾಗೂ ನಗರದ ವಿವಿಧೆಡೆ ನಗರಸಭೆಯಿಂದ ಒಣ ಕಸ ಹಸಿ ಕಸದ ಬುಟ್ಟಿಗಳನ್ನು ಇಡಲಾಗಿದೆ. ಬೀದಿ ವ್ಯಾಪಾರಗಳು ಈ ಬುಟ್ಟಿಗಳಲ್ಲಿಯೇ ಕಸವನ್ನು ಹಾಕಿ ನಗರದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದರು.
ಎಸ್.ಬಿ.ಐ ಪ್ರಾದೇಶಿಕ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ದೀಪಕ್, ಕೆನರಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಅಲೋಕ್, ನಗರ ವೈದ್ಯಾಧಿಕಾರಿ ಡಾ. ವಿನೂತಾ, ಜಿಲ್ಲಾ ಕೌಶಲ್ಯ ಮಿಷನ್ ಸಹಾಯಕ ನಿರ್ದೇಶಕ ಬಸಪ್ಪ ತಳವಡಿ, ಅಭಿಯಾನ ವ್ಯವಸ್ಥಾಪಕರು ವಿಠೋಬ ಬಿ., ವಿಜಯಕುಮಾರ ಪಾಟೀಲ್, ಎಸ್.ಬಿ.ಐ ಬ್ಯಾಂಕ್ ಚಿತ್ತಾಪುರ ರಸ್ತೆ ವ್ಯವಸ್ಥಾಪಕಿ ಜ್ಯೋತಿಕುಮಾರಿ, ಸಮುದಾಯ ಸಂಘಟಕ ಭೀಮಣ್ಣ ಕೆ. ವೈದ್ಯ, ಜಿಲ್ಲಾ ಲೀಡ್ ಬ್ಯಾಂಕ್ ಸಹಾಯಕ ಅಮೀರ್ ಪಟೇಲ್ ಇದ್ದರು.-----
ಫೋಟೊ: 11ವೈಡಿಆರ್19:ಯಾದಗಿರಿ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸುವ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಉದ್ಘಾಟಿಸಿದರು.