ಸಾರಾಂಶ
ಸಂಡೂರು: ಪಟ್ಟಣದಲ್ಲಿ ಶುಕ್ರವಾರ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆ ಹಾಗೂ ಸೋಲಾರ್ ಪಂಪ್‌ಸೆಟ್ ಯೋಜನೆಯಾದ ಕುಸುಮ್ ಬಿ ಯೋಜನೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಯೋಜನೆಯ ಮಾಹಿತಿ ಕುರಿತು ಭಿತ್ತಿ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಜೆಸ್ಕಾಂ ಎಇಇ ಕೆ.ಎ. ಉಮೇಶ್‌ಕುಮಾರ್ ಯೋಜನೆಯ ಕುರಿತು ಮಾತನಾಡಿ, ಈ ಯೋಜನೆ ಮನೆಗಳ ಚಾವಣಿಯ ಮೇಲೆ ಸೋಲಾರ್ ರೂಫ್ ಟಾಪ್ ಸಿಸ್ಟಮ್‌ಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಗುರಿಯನ್ನು ಹೊಂದಿರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಮಾನದಂಡ ವೆಚ್ಚದ ಶೇ ೬೦ರಷ್ಟು ಸಹಾಯ ಧನವನ್ನು ಒದಗಿಸಲಾಗುತ್ತದೆ. ಒಂದು ಕಿಲೋ ವ್ಯಾಟ್ ಸೌರ ಘಟಕ ಸ್ಥಾಪಿಸಲು ೧೦ ಚದರ ಮೀಟರ್ ಸ್ಥಳದ ಅಗತ್ಯವಿದೆ ಎಂದರು.
ವಿದ್ಯುತ್ ಬಿಲ್ ಕಡಿಮೆ ಮಾಡುವ ಮೂಲಕ ಉಳಿತಾಯ, ಕಡಿಮೆ ನಿರ್ವಹಣೆ ವೆಚ್ಚ, ಸಬ್ಸಿಡಿಯೊಂದಿಗೆ ಒಂದು ಬಾರಿ ಹೂಡಿಕೆ, ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ, ಜೆಸ್ಕಾಂಗೆ ವಿದ್ಯುತ್ ಮಾರಾಟ ಮಾಡುವ ಮೂಲಕ ಲಾಭದ ಪ್ರಯೋಜನಗಳಿವೆ. ಹೆಚ್ಚಿನ ಮಾಹಿತಿಗಾಗಿ ಜೆಸ್ಕಾಂ ಉಪ ವಿಭಾಗದ ಕಚೇರಿಯನ್ನು ಸಂಪರ್ಕಿಸಲು ಅಥವಾ ೧೯೧೨ ಸಂಖೆಗೆ ಕರೆ ಮಾಡಲು ಸೂಚಿಸಿದರು.ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯ ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್‌ಸೆಟ್ ಯೋಜನೆ ಕುಸುಮ್ ಬಿ ಯೋಜನೆಯ ಕುರಿತು ವಿವರಿಸಿದರು.
ತಾಲೂಕು ಪಂಚಾಯ್ತಿ ಇಒ ಹೆಚ್. ಷಡಾಕ್ಷರಯ್ಯ, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಲಿಬಾಷಾ, ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ, ಕೃಷಿ ಇಲಾಖೆ ಅದಿಕಾರಿ ರಾಘವೇಂದ್ರ, ಮುಖಂಡರಾದ ಆಶಾಲತಾ ಸೋಮಪ್ಪ ಮುಂತಾದವರು ಉಪಸ್ಥಿತರಿದ್ದರು.ಸಂಡೂರಿನಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಸಂಡೂರು ಕ್ಷೇತ್ರದ ಶಾಸಕ ಈ. ಅನ್ನಪೂರ್ಣ ತುಕಾರಾಂ ಅವರು ಶುಕ್ರವಾರ ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆ ಹಾಗೂ ಸೋಲಾರ್ ಪಂಪ್‌ಸೆಟ್ ಯೋಜನೆಯಾದ ಕುಸುಮ್ ಬಿ ಯೋಜನೆಯ ಭಿತ್ತಿ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿ, ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದರು.