ಸಾರಾಂಶ
ಹಿರೇಕೆರೂರು: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ದೇಶದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ವೃತ್ತಿಗಳವರಿಗೆ ಕೌಶಲ್ಯ ಮತ್ತು ಆರ್ಥಿಕ ಬಲ ನೀಡಿ ಅವರ ಜೀವನ ಮಟ್ಟವನ್ನು ಸುಧಾರಿಸುವ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ತಾಲೂಕಿನ ತಾವರಗಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ಆರಂಭಗೊಂಡ ಪಿ.ಎಮ್. ವಿಶ್ವಕರ್ಮ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಬೇರೆ ಬೇರೆ ಕಡೆ ತಮ್ಮ ವೃತ್ತಿಯ ಪ್ರದರ್ಶನ, ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಈಗ ಯಾವ ವೃತ್ತಿ ಮಾಡುತ್ತಿದ್ದಾರೆಯೋ ಅವರಿಗೆ ಪ್ರಾರಂಭಿಕವಾಗಿ ಒಂದು ವಾರದ ಅಂದರೆ ಕನಿಷ್ಠ ೪೦ ಗಂಟೆಗಳ ಪ್ರಾಥಮಿಕ ತರಬೇತಿ ನೀಡಿ ಅವರ ಕೌಶಲ್ಯ ವೃದ್ಧಿಗೆ ನೆರವು ನೀಡಲಾಗುತ್ತಿದೆ. ಕೇಂದ್ರ ಸರಕಾರದ ಈ ಯೋಜನೆಯ ಸದುದ್ದೇಶವನ್ನು ಜನರು ಪಡೆದು ಜೀವನ ರೂಪಿಸಿಕೊಳ್ಳಬೇಕು. ತಾಲೂಕಿನಲ್ಲಿ ತರಬೇತಿ ಕೇಂದ್ರ ಆರಂಭಗೊಂಡಿರುವುದು ತಾಲೂಕಿನ ಜನರಿಗೆ ಅನುಕೂಲಕರವಾಗಿದೆ ಎಂದರು.ಪಿ.ಎಮ್.ವಿಶ್ವಕರ್ಮ ರಾಜ್ಯ ಸಂಯೋಜಕ ಮಾಲತೇಶ ಛತ್ರದ ಮಾತನಾಡಿ, ತರಬೇತಿ ಅವಧಿಯಲ್ಲಿ ದಿನಕ್ಕೆ ೫೦೦ ರು.ಗಳಂತೆ ತರಬೇತಿ ಭತ್ಯೆ ನೀಡಲಾಗುತ್ತದೆ. ಅನಂತರ ವೃತ್ತಿಗೆ ಸಂಬಂಧಿಸಿದ ಸುಧಾರಿತ ಸಾಮಗ್ರಿ ಖರೀದಿಗೆ ೧೫,೦೦೦ ರು.ಗಳ ಅನುದಾನ ನೀಡಲಾಗುತ್ತದೆ. ತರಬೇತಿ ಮುಗಿಸಿದ ಬಳಿಕ ಸರಕಾರವು ಮೊದಲ ಹಂತದಲ್ಲಿ ಒಂದು ಲಕ್ಷ ರು. ಹಾಗೂ ಅದನ್ನು ಮರುಪಾವತಿಸಿದ ಬಳಿಕ ಎರಡನೇ ಹಂತದಲ್ಲಿ ಎರಡು ಲಕ್ಷ ರು. ಸಾಲವನ್ನು ಶೇ. ೫ರ ಕಡಿಮೆ ಬಡ್ಡಿಯಲ್ಲಿ ನೀಡುತ್ತದೆ. ಮೊದಲ ಹಂತದ ಸಾಲ ಮರುಪಾವತಿಗೆ ೧೮ ತಿಂಗಳು ಹಾಗೂ ಎರಡನೇ ಹಂತದ ಸಾಲ ಮರುಪಾವತಿಗೆ ೩೦ ತಿಂಗಳ ಕಾಲವಕಾಶವಿರುತ್ತದೆ. ಈ ಸಾಲ ಪಡೆಯಲು ಯಾವುದೇ ರೀತಿಯ ಜಾಮೀನು ಬೇಕಾಗಿಲ್ಲ. ಯೋಜನೆಗೆ ಅರ್ಹರಾದ ಕೂಡಲೇ ಸ್ಥಳೀಯ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ದೊರಕುತ್ತದೆ ಎಂದರು.ಈ ಸಂದರ್ಭದಲ್ಲಿ ತರಬೇತಿ ಕೇಂದ್ರದ ನಿರ್ದೇಶಕ ಪ್ರಕಾಶ ಬಣಕಾರ, ರವಿಶಂಕರ ಬಾಳಿಕಾಯಿ, ಪುಟಣ್ಣ ಪಾಟೀಲ, ಕಂಠಾದರ್ ಅಂಗಡಿ, ಪರಮೇಶಪ್ಪ ಹಲಗೇರಿ, ವೀರಭದ್ರಪ್ಪ ಗಿರಿಮಲ್ಲಪ್ಪನವರ, ಬಸನಗೌಡ ಅಬಲೂರು, ಚನ್ನಬಸಪ್ಪ ಗಿರಿಮಲ್ಲಪ್ಪನವರ, ಕುಮಾರ ಬಣಕಾರ, ರಿಂದೇಶ ಬತ್ತಿಕೊಪ್ಪ, ಮಹಾಬಲೇಶ್ವರ ಗಿರಿಮಲ್ಲಪ್ಪನವರ, ಹನುಮಂತಗೌಡ ಅಜ್ಜಪ್ಪನವರ, ಪರಮೇಶ ಗಿರಿಮಲ್ಲಪ್ಪನವರ, ಶಿವು ಗಿರಿಮಲ್ಲಪ್ಪನವರ ನಾರಾಯಣ ಬಡಿಗೇರ, ಮೌನೇಶ ಬಡಿಗೇರ ಹಾಗೂ ತರಬೇತಿ ಫಲಾನುಭವಿಗಳು ಇದ್ದರು.