ಪಿಎಂಎಫ್‌ಬಿವೈ ಅಕ್ರಮ, ಸೂತ್ರದಾರರು ಯಾರು?

| Published : Apr 20 2025, 01:57 AM IST

ಪಿಎಂಎಫ್‌ಬಿವೈ ಅಕ್ರಮ, ಸೂತ್ರದಾರರು ಯಾರು?
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಡೆದ ಅಕ್ರಮದ ಸೂತ್ರದಾರರು ಯಾರು ಎನ್ನುವುದು ಸದ್ಯದ ಕುತೂಹಲವಾಗಿದೆ. ಅಕ್ರಮ ಬಗೆದಷ್ಟು ವಿಸ್ತಾರವಾಗುತ್ತಾ ಸಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಡೆದ ಅಕ್ರಮದ ಸೂತ್ರದಾರರು ಯಾರು ಎನ್ನುವುದು ಸದ್ಯದ ಕುತೂಹಲವಾಗಿದೆ. ಅಕ್ರಮ ಬಗೆದಷ್ಟು ವಿಸ್ತಾರವಾಗುತ್ತಾ ಸಾಗಿದ್ದು ಪಾಳು ಬಿದ್ದ ಭೂಮಿಯಲ್ಲಿ ಈರುಳ್ಳಿ ಬೆಳೆ, ರೈತರ ಭೂಮಿಗೆ ಮತ್ತೊಬ್ಬರು ಬೆಳೆ ವಿಮೆ ಕಂತು ಪಾವತಿ ಮತ್ತು ಬೆಳೆ ಪರಿಹಾರ ಪಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಈ ನಡುವೆ ಎಲ್ಲ ಅಕ್ರಮಗಳಿಗೂ ಎಫ್‌ಐಡಿಯೇ ಕಾರಣವಾಗಿದ್ದು, ಇದನ್ನು ಮಾಡಿದವರು ಯಾರು ಎನ್ನುವುದು ಕಂದಾಯ, ಕೃಷಿ ಇಲಾಖೆಯ ಮೇಲಾಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ..

ಕಂದಾಯ ಅಧಿಕಾರಿಗಳ ಕರಾಮತ್ತು:

ಬೊಮ್ಮನಾಳ ಹೋಬಳಿ ವ್ಯಾಪ್ತಿಯಲ್ಲಿ ನಡೆದ ಅಷ್ಟೂ ಅಕ್ರಮಗಳಲ್ಲಿಯೂ ಬೆಳೆ ತಿದ್ದುಪಡಿ ಮಾಡಿಯೇ ಪರಿಹಾರ ಪಡೆಯಲಾಗಿದೆ. ಪಾಳು ಬಿದ್ದ ಭೂಮಿಯಲ್ಲಿನ ಬೆಳೆ ತಿದ್ದುಪಡಿ ಮಾಡಿದ್ದೇ ಕಂದಾಯ ಇಲಾಖೆ ಅಧಿಕಾರಿಗಳು ಎನ್ನುವುದು ಬೆಳಕಿಗೆ ಬಂದಿದೆ. ಬೆಳೆ ಸರ್ವೇ ಮಾಡುವುದು, ಆಕ್ಷೇಪ ಸರಿಪಡಿಸುವುದು ಮತ್ತು ಬೆಳೆ ಬದಲಾಯಿಸುವುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಹೀಗಾಗಿ, ಈ ಎಲ್ಲ ಕರಾಮತ್ತುಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳೇ ಸೂತ್ರದಾರರು ಎಂದು ಹೇಳಲಾಗುತ್ತದೆ.

ಮತ್ತೊಂದು ಅಕೌಂಟ್ ಫ್ರೀಜ್:

ಹನುಮನಾಳ ಹೋಬಳಿಯಲ್ಲಿಯೇ ಒಂದೇ ಅರ್ಜಿ ಅಡಿ ಹತ್ತಾರು ಖಾತೆಗಳಿಗೆ ಬೆಳೆ ವಿಮೆ ಪಾವತಿಸಿ ಪರಿಹಾರ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಬ್ಯಾಂಕ್‌ ಖಾತೆಯನ್ನು ಫ್ರೀಜ್‌ ಮಾಡಿದ್ದಾರೆ. ಬೆಳೆ ವಿಮೆ ಅಕ್ರಮದ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸುತ್ತಿದ್ದರೂ ಜಮೆಯಾದ ಖಾತೆಯಿಂದ ಯಾರೂ ಹಣ ಬಿಡಿಸಿಕೊಂಡಿಲ್ಲ. ಅಕ್ರಮದ ಗ್ಯಾಂಗ್ ಸಹ ನಾಪತ್ತೆಯಾಗಿದ್ದು, ಖಾತೆಗೆ ಜಮೆಯಾಗಿರುವ ಪರಿಹಾರ ಮೊತ್ತ ಪಡೆಯಲು ಮುಂದೆ ಬರುತ್ತಿಲ್ಲ.

ಕನ್ನಡಪ್ರಭ ವರದಿ ಉಲ್ಲೇಖಿಸಿ ಖಾತೆ ಫ್ರೀಜ್

ಈಗಾಗಲೇ ಅಕ್ರಮಕ್ಕೆ ಸಂಬಂಧಿಸಿದಂತೆ ಒಂದು ಖಾತೆಯನ್ನು ಫ್ರೀಜ್‌ ಮಾಡಿರುವ ಕೃಷಿ ಇಲಾಖೆ ಅಧಿಕಾರಿಗಳು ಮತ್ತೊಂದು ಖಾತೆಯನ್ನು ಫ್ರೀಜ್ ಮಾಡಲು ಬ್ಯಾಂಕಿಗೆ ಪತ್ರ ಬರೆದಿದ್ದಾರೆ. ಹೀಗೆ ಪತ್ರ ಬರೆಯುವಾಗ ಕನ್ನಡಪ್ರಭದ ವರದಿ ಉಲ್ಲೇಖಿಸಿಯೇ ಖಾತೆಯನ್ನು ಪ್ರೀಜ್ ಮಾಡುವಂತೆ ಸೂಚಿಸಿದ್ದಾರೆ. ಹನುಮನಾಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬ್ಯಾಂಕಿಗೆ ಪತ್ರ ಬರೆದಿದ್ದಾರೆ.ಮತ್ತಷ್ಟು ಅಕ್ರಮ ಬೆಳಕಿಗೆ

ಶಾಡಲಗೇರ, ಹನುಮನಾಳ, ಬಿಳೇಕಲ್, ಕುರುಮನಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈರುಳ್ಳಿ ಬಿತ್ತನೆ ಮಾಡದೆಯೇ ಬೆಳೆ ವಿಮಾ ಪರಿಹಾರ ಪಡೆದುಕೊಂಡಿರುವ ದಾಖಲೆ ಕನ್ನಡಪ್ರಭಕ್ಕೆ ಲಭ್ಯವಾಗಿವೆ.