ರೈತರು ಸ್ವಾವಲಂಬಿಗಳಾಗಲು ಪಿಎಂಎಫ್‌ಎಂಇ ಸುವರ್ಣವರ್ಣಾವಕಾಶ

| Published : Jul 10 2025, 12:45 AM IST / Updated: Jul 10 2025, 12:46 AM IST

ರೈತರು ಸ್ವಾವಲಂಬಿಗಳಾಗಲು ಪಿಎಂಎಫ್‌ಎಂಇ ಸುವರ್ಣವರ್ಣಾವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ-ನಮ್ಮ ಹೊಲಗಳಲ್ಲಿ ಬೆಳೆದ ಉತ್ಪನ್ನಗಳಿಗೆ ಸಕಾಲಕ್ಕೆ ಸರಿಯಾದ ಬೆಲೆ ಸಿಗದೇ ರೈತರು ಮತ್ತು ಸಣ್ಣ ಉದ್ದಿಮೆದಾರರು ತೊಂದರೆಯಲ್ಲಿದ್ದಾರೆ. ಹಣ್ಣು, ತರಕಾರಿ, ಧಾನ್ಯಗಳು ಕಾಲಕ್ಕೆ ಸರಿಯಾಗಿ ಮಾರಾಟವಾಗದೆ ವ್ಯರ್ಥವಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಯ ಯೋಜನೆಯಾಗಿದೆ.

ಧಾರವಾಡ: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವ ಯೋಜನೆಯು ಕೇವಲ ಸರ್ಕಾರಿ ಸೌಲಭ್ಯವಲ್ಲ; ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡುವ, ರೈತರನ್ನು ಹಾಗೂ ಸಣ್ಣ ಉದ್ಯಮಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸುವರ್ಣಾವಕಾಶ. ಈ ಯೋಜನೆಯ ಮೂಲಕ ರೈತರು ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ ಸಲಹೆ ನೀಡಿದರು.

ಕೃಷಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವ (ಪಿಎಂಎಫ್‌ಎಂಇ) ಯೋಜನೆಯ ಕುರಿತು ಜಿಲ್ಲಾ ಮಟ್ಟದಲ್ಲಿ ವಿವಿಧ ಪಾಲುದಾರರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ-ನಮ್ಮ ಹೊಲಗಳಲ್ಲಿ ಬೆಳೆದ ಉತ್ಪನ್ನಗಳಿಗೆ ಸಕಾಲಕ್ಕೆ ಸರಿಯಾದ ಬೆಲೆ ಸಿಗದೇ ರೈತರು ಮತ್ತು ಸಣ್ಣ ಉದ್ದಿಮೆದಾರರು ತೊಂದರೆಯಲ್ಲಿದ್ದಾರೆ. ಹಣ್ಣು, ತರಕಾರಿ, ಧಾನ್ಯಗಳು ಕಾಲಕ್ಕೆ ಸರಿಯಾಗಿ ಮಾರಾಟವಾಗದೆ ವ್ಯರ್ಥವಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಯ ಯೋಜನೆಯಾಗಿದೆ. ಇದನ್ನು ಸದುಪಯೋಗ ಪಡೆದುಕೊಂಡು ರೈತರು, ರೈತ ಗುಂಪುಗಳು, ಇತರರು ಉದ್ಯಮಿದಾರರಾಗಿ, ಯುವ ಜನತೆಗೆ ಸ್ಪೂರ್ತಿದಾಯಕರಾಗಿ ಎಂದರು.

ಈ ಯೋಜನೆಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗಳು, ಸಿರಿಧಾನ್ಯಗಳ ಮತ್ತು ಇತರೆ ಧಾನ್ಯಗಳ ಸಂಸ್ಕರಣೆಗಳಾದ ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ಡ್ ಆಯಿಲ್, ಮೆಣಸಿನ ಪುಡಿ ಘಟಕಗಳು, ಅನಾನಸ್ ಸಂಸ್ಕರಣಾ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು, ಸಾಗರ ಉತ್ಪನ್ನಗಳ ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳು ಸೇರಿದಂತೆ ವಿವಿಧ ರೀತಿಯ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಸರ್ಕಾರದಿಂದ ಸಹಾಯಧನದ ಇರಲಿದೆ. ಈ ಯೋಜನೆಯಲ್ಲಿ ಪ್ರತಿ ಯೋಜನಾ ಘಟಕಕ್ಕೆ ಕೇಂದ್ರ ಸರ್ಕಾರವು ಶೇ. 35 ರಷ್ಟು ಮತ್ತು ರಾಜ್ಯ ಸರ್ಕಾರವು ಶೇ. 15 ರಷ್ಟು ಸೇರಿ ಒಟ್ಟು ಶೇ. 50 ರಷ್ಟು ಸಹಾಯಧನವಿದೆ. ಅಥವಾ ಗರಿಷ್ಠ ₹15 ಲಕ್ಷ ಸಹಾಯಧನವಿದೆ ಎಂದರು.

ಕೇಂದ್ರ ಸರ್ಕಾರದಿಂದ ₹10 ಸಾವಿರ ಕೋಟಿ ರೂಪಾಯಿ ಅನುದಾನವಿದ್ದು, ವಿವಿಧ ರಾಜ್ಯಗಳಿಗೆ ಕಳೆದ ಐದು ವರ್ಷಗಳಲ್ಲಿ ಒದಗಿಸಲಾಗಿದೆ. ಕರ್ನಾಟಕ ರಾಜ್ಯಕ್ಕೆ ₹493.65 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ 2 ಲಕ್ಷ ಘಟಕಗಳು ಈ ಯೋಜನೆಯಲ್ಲಿ ಭಾಗಿಯಾಗಿವೆ ಎಂದ ಅವರು, ಜಿಲ್ಲೆಯಲ್ಲಿ ಯೋಜನೆ ಆರಂಭವಾದಾಗಿನಿಂದ ಇಲ್ಲಿಯ ವರೆಗೆ ಬ್ಯಾಂಕ್ ಸಾಲಕ್ಕಾಗಿ 600 ಅರ್ಜಿಗಳು ಬಂದಿದ್ದು, ಜಿಲ್ಲಾ ಮಟ್ಟದ ಸಮಿತಿಯಲ್ಲಿ 592ನ್ನು ಪರಿಶೀಲನೆ ಮಾಡಲಾಗಿದೆ. 564 ಪ್ರಸ್ತಾವನೆಗಳನ್ನು ವಿವಿಧ ಬ್ಯಾಂಕುಗಳಿಗೆ ಕಳಿಸಿದ್ದು, 400 ಫಲಾನುಭವಿಗಳಿಗೆ ಸಾಲ ಮಂಜೂರಾಗಿದೆ. 53 ಅರ್ಜಿಗಳು ವಿವಿಧ ಬ್ಯಾಂಕುಗಳಲ್ಲಿ ಪರಿಶೀಲನೆ ಹಂತದಲ್ಲಿವೆ. ₹30 ಕೋಟಿ ಯೋಜನಾ ವೆಚ್ಚದ ಆಹಾರ ಸಂಸ್ಕರಣಾ ಘಟಕಗಳಿಗೆ ಇದುವರೆಗೆ ₹7.5 ಕೋಟಿ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಸಿ.ಎನ್. ಶಿವಪ್ರಕಾಶ ಅಂಕಿ ಸಮೇತ ಮಾಹಿತಿ ನೀಡಿದರು.

ಯೋಜನೆಯ ಕುರಿತು ಜಿಲ್ಲೆಯಲ್ಲಿ ಆಸಕ್ತರಿಗೆ ಮಾಹಿತಿ ನೀಡಿ, ಬ್ಯಾಂಕ್ ಲಿಂಕ್ ಮಾಡಿಕೊಡಲು 15 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ. ಆಸಕ್ತರಿಗೆ ಅಗತ್ಯ ಮಾಹಿತಿ, ದಾಖಲೆಗಳ ಸಂಗ್ರಹಕ್ಕೆ ಸಹಾಯ ಮತ್ತು ಬ್ಯಾಂಕ್ ಲಿಂಕ್ ಮಾಡಿ, ಸಾಲ ಸೌಲಭ್ಯ ಮತ್ತು ಸಹಾಯಧನ ಲಭಿಸುವಂತೆ ನೆರವಾಗುತ್ತಾರೆ. ಆಸಕ್ತರು ಇವರ ನೆರವು ಪಡೆಯಬಹುದು ಎಂದರು.

ಸಭೆಯ ಆರಂಭದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಳುಹಿಸಿದ ಸಂದೇಶವನ್ನು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಓದಿದರು. ಜಂಟಿ ಕೃಷಿ ನಿರ್ದೇಶಕ ಶಿವಕುಮಾರ ಎಚ್.ಕೆ. ಮಾತನಾಡಿದರು. ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ನಾರಾಯಣಸ್ವಾಮಿ, ಧಾರವಾಡ ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಬಸವರಾಜ ಗಡದವರ, ನಬಾರ್ಡ್‌ನ ಮಯೂರ ಕಾಂಬಳೆ ಇದ್ದರು.