- ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ

- - -

- ಮೇ 7ರಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ಠಾಣೆಯಲ್ಲಿ ಬಾಲಕನ ತಾಯಿ ದೂರು

- ಮೇ 8ರಂದು ಪೋಕ್ಸೋ ಕಾಯ್ದೆ ಸೆಕ್ಷನ್ 8, 12, ಐಪಿಸಿ ಕಲಂ 323, 506 ರಡಿ ಎಫ್‌ಐಆರ್

- ತನಿಖೆ ಆರಂಭವಾಗಿದ್ದು, ಬಾಲಕನ ಹೇಳಿಕೆ ಪಡೆಯಲಾಗುವುದು: ಎಸ್‌ಪಿ ಡಾ.ಶೇಖರ್


- - -

ಕನ್ನಡಪ್ರಭ ವಾರ್ತೆ ಹರಿಹರ

ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರ ವಿರುದ್ಧ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಾಲಕನ ತಾಯಿ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೃತ್ಯ ನಡೆದ ಸ್ಥಳ ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಮೊದಲು ''''ಜೀರೋ ಎಫ್‌ಐಆರ್'''' ದಾಖಲಿಸಿ, ನಂತರ ಪ್ರಕರಣವನ್ನು ಹರಿಹರಕ್ಕೆ ವರ್ಗಾಯಿಸಲಾಯಿತು.

ಮೇ 8ರಂದು ಹರಿಹರ ಗ್ರಾಮಾಂತರ ಪೊಲೀಸರು ಪೋಕ್ಸೋ ಕಾಯ್ದೆಯ ಸೆಕ್ಷನ್ 8, 12 ಹಾಗೂ ಐಪಿಸಿ ಕಲಂ 323, 506 ರಡಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ. ಶೇಖರ್ ಅವರು, ಪ್ರಕರಣದ ತನಿಖೆ ಆರಂಭವಾಗಿದ್ದು, ಶೀಘ್ರವೇ ಸಂತ್ರಸ್ತ ಬಾಲಕನ ಹೇಳಿಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

2021 ರಿಂದ 2024ರ ಅವಧಿಯಲ್ಲಿ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ಈ ದೌರ್ಜನ್ಯ ನಡೆದಿದೆ. ಸ್ವಾಮೀಜಿಯವರು ಮಠದ ಸ್ನಾನಗೃಹದಲ್ಲಿ ಬಾಲಕ ಮತ್ತು ಆತನ ಸಹಪಾಠಿ ಮಕ್ಕಳ ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿ, ಮಕ್ಕಳಿಂದ ತಮ್ಮ ಗುಪ್ತಾಂಗಗಳಿಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಮತ್ತು ಮಕ್ಕಳ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು ಎಂಬ ಗಂಭೀರ ಅಂಶ ದೂರಿನಲ್ಲಿದೆ.

ಈ ಕೃತ್ಯಕ್ಕೆ ಮಕ್ಕಳು ಪ್ರತಿರೋಧ ಒಡ್ಡಿದಾಗ ಅವರಿಗೆ ದೈಹಿಕವಾಗಿ ಹೊಡೆಯುವುದು ಮತ್ತು ಊಟ ನೀಡದೇ ಶಿಕ್ಷಿಸಲಾಗುತ್ತಿತ್ತು. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೀವ ತೆಗೆಯುವುದಾಗಿ ಸ್ವಾಮೀಜಿಯವರು ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಬೆಳವಣಿಗೆಯ ಮುನ್ಸೂಚನೆ ಅರಿತಿದ್ದ ಸ್ವಾಮೀಜಿಯವರು ಏ.21ರಂದೇ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮೇ 2ರಂದು ಜಾಮೀನು ಮಂಜೂರು ಮಾಡಿದ್ದರಿಂದ ಸದ್ಯಕ್ಕೆ ಶ್ರೀಗಳಿಗೆ ಬಂಧನದ ಭೀತಿಯಿಲ್ಲ. ಆದರೂ, ಪ್ರಕರಣವು ಅತ್ಯಂತ ಸೂಕ್ಷ್ಮ ಆಗಿರುವುದರಿಂದ ಪೊಲೀಸರು ತರಾತುರಿಯಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೇ, ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಶ್ರೀಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿನ್ನೆಲೆ: ಪೀಠದಲ್ಲಿ ಪದಚ್ಯುತಿ ಮತ್ತು ನಿಷೇಧಾಜ್ಞೆ ಪೀಠದ ಟ್ರಸ್ಟ್ ಇತ್ತೀಚೆಗಷ್ಟೇ ವಚನಾನಂದ ಶ್ರೀಗಳನ್ನು ಪೀಠದಿಂದ ಪದಚ್ಯುತಗೊಳಿಸಿತ್ತು. ಈ ಅವಧಿಯಲ್ಲೇ ಶ್ರೀಗಳ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಆರೋಪಗಳು ಕೇಳಿಬಂದಿದ್ದವು. ಇದಕ್ಕೂ ಮುನ್ನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಸೇರಿದಂತೆ ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.

ಶ್ರೀಗಳನ್ನು ಪೀಠದಿಂದ ಪದಚ್ಯುತಿಗೊಳಿಸಿದ ನಂತರ ಮಠದಲ್ಲಿ ಸ್ವಾಮೀಜಿ ಹಾಗೂ ಟ್ರಸ್ಟ್ ಸದಸ್ಯರ ನಡುವೆ ಶಕ್ತಿ ಪ್ರದರ್ಶನಗಳು ನಡೆದಿದ್ದವು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವುದನ್ನು ಅರಿತ ಜಿಲ್ಲಾಡಳಿತ, ಮೇ 4 ರಿಂದ ಮೇ 31ರವರೆಗೆ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಕೃತ್ಯದ ಕುರಿತು ಮಕ್ಕಳು ತಮ್ಮ ಹಿರಿಯರಿಗೆ ತಿಳಿಸಿದ ನಂತರ ತಡವಾಗಿ ದೂರು ನೀಡಲಾಗಿದೆ. ಪೋಕ್ಸೊ ಪ್ರಕರಣ ದಾಖಲಾಗಿರುವುದು ವಿವಾದಕ್ಕೆ ಹೊಸ ತಿರುವು ನೀಡಿದ್ದು, ತನಿಖೆಯ ವರದಿಗಾಗಿ ಸಮಾಜವು ಕಾಯುತ್ತಿದೆ. ತನಿಖೆಯ ಹಂತದಲ್ಲಿ ಸಂತ್ರಸ್ತ ಬಾಲಕನ ಹೇಳಿಕೆಯು ಈ ಪ್ರಕರಣದಲ್ಲಿ ನಿರ್ಣಾಯಕವಾಗಲಿದೆ.

- - -

-13HRR.01: ವಚನಾನಂದ ಶ್ರೀ