ಪೋಕ್ಸೋ ಆಧುನಿಕ ಕಾಲಘಟ್ಟದ ಕಠಿಣ ಕಾಯ್ದೆ: ರವಿ

| Published : Jul 11 2024, 01:31 AM IST

ಸಾರಾಂಶ

ಹೆಣ್ಣು ಮಕ್ಕಳ ರಕ್ಷಣೆಗಾಗಿಯೇ ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಇದು ಆಧುನಿಕ ಯುಗದ ಕಠಿಣ ಕಾಯ್ದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ರವಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಣ್ಣು ಮಕ್ಕಳ ರಕ್ಷಣೆ, ಘನತೆ, ಗೌರವ ಎತ್ತಿ ಹಿಡಿಯಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಪೋಕ್ಸೋ ಕಾಯ್ದೆ ಆಧುನಿಕ ಕಾಲಘಟ್ಟದ ಅತ್ಯಂತ ಕಠಿಣವಾದ ಕಾಯ್ದೆಯಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ (ಸಮಗ್ರ ಮಕ್ಕಳ ರಕ್ಷಣಾ ಯೋಜನೆ) ನಿರ್ದೇಶಕ ರವಿ ತಿಳಿಸಿದರು.

ಬುಧವಾರ ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನಾಯಕತ್ವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೋಕ್ಸೋ ಕಾಯ್ದೆಯಡಿ ಒಪ್ಪಿತ ಮದುವೆ ಆಗದಿದ್ದರೆ ಅಪ್ರಾಪ್ತೆಯನ್ನು ವಿವಾಹವಾದ ಗಂಡು ಮತ್ತು ಮನೆಯವರೆಲ್ಲರೂ ಜೈಲಿನಲ್ಲಿ ಇರಬೇಕಾಗುತ್ತದೆ. ಒಂದು ವೇಳೆ ಬಾಲ್ಯ ವಿವಾಹವಾಗುವ ಹೆಣ್ಣು ಮಗಳು ದೂರು ಕೊಟ್ಟರೆ ಅಥವಾ ಬಾಲಕಿ ಒಪ್ಪಿಗೆ ಇಲ್ಲದೇ ಮದುವೆ ಮಾಡಿದ್ದರೆ ಕಾನೂನು ರೀತ್ಯ ಕಠಿಣ ಕ್ರಮಕ್ಕೆ ಎಲ್ಲರೂ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾಗತೀಕರಣಗೊಂಡು 25 ವರ್ಷಗಳು ಕಳೆದಿದ್ದರೂ ಹೆಣ್ಣುಮಕ್ಕಳು ಬಾಲ್ಯ ವಿವಾಹದಂತಹ ಸಂಕಷ್ಟಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಸವಾಲುಗಳನ್ನು ಒಡ್ಡುತ್ತಿದೆ. ಹೀಗಾಗಿ ವಿಭಿನ್ನವಾದ ಕಾರ್ಯತಂತ್ರಗಳ ಮೂಲಕ ಹೇಗೆ ಎದುರಿಸಬೇಕೆನ್ನುವುದೇ ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲ್ಯವಿವಾಹದ ಬಲೆಯೊಳಗೆ ಸಿಕ್ಕಿಕೊಂಡಿರುವ ಸಂತ್ರಸ್ತರು ಅದರಿಂದ ಆಚೆ ಬಂದು ಸಮಾಜಕ್ಕೂ ಕೂಡ ಧೈರ್ಯ ತುಂಬುವ ಕಳಕಳಿ, ಕಾಳಜಿ ತೋರುತ್ತಿರುವುದು ಶ್ಲಾಘನೀಯ. ಚಾಮರಾಜನಗರದಂತಹ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ನಂತರ ವಿಚ್ಛೇದನ ಪಡೆಯಲು ಗ್ರಾಮಗಳ ಮುಖಂಡರು, ಧಾರ್ಮಿಕ ಗುರುಗಳು ದಂಡ ಕಟ್ಟಿಸಿಕೊಳ್ಳುವುದು ಸಮಾಜ ಒಪ್ಪುವುದಿಲ್ಲ ಎಂದರು.

ಸಮಾರಂಭದಲ್ಲಿ ವಿದ್ಯಾನಿಕೇತನದ ಡಾ। ನಾಗರಾಜ್‌, ಸಿಐಎಫ್‌ ತಂಡದ ಡಾ। ವಾಸುದೇವ ಶರ್ಮಾ, ಪತ್ರಕರ್ತ ರವೀಂದ್ರಭಟ್‌, ಮುತ್ತಮ್ಮ ಹಾಗೂ ಬೆಳಗಾವಿ, ಬೀದರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲೆಗಳಿಂದ ಆಗಮಿಸಿದ ಬಾಲ್ಯ ವಿವಾಹ ಸಂತ್ರಸ್ತರು ಉಪಸ್ಥಿತರಿದ್ದರು.