ಸಾರಾಂಶ
ಮಂಡ್ಯತಾಲೂಕಿನ ಎಚ್.ಕೋಡಿಹಳ್ಳಿ ಗೇಟ್ ಬಳಿ ಇರುವ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ಹಾಗೂ ಅಂಕಪಟ್ಟಿ ನೀಡದ ಹಿನ್ನೆಲೆಯಲ್ಲಿ ಜು.೪(ಶುಕ್ರವಾರ) ಶಾಲೆಯ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಎಚ್.ಕೋಡಿಹಳ್ಳಿ ಗೇಟ್ ಬಳಿ ಇರುವ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ಹಾಗೂ ಅಂಕಪಟ್ಟಿ ನೀಡದ ಹಿನ್ನೆಲೆಯಲ್ಲಿ ಜು.೪(ಶುಕ್ರವಾರ) ಶಾಲೆಯ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಪೋಷಕರು ತಿಳಿಸಿದ್ದಾರೆ.ತಾಲೂಕು ಎಚ್.ಕೋಡಿಹಳ್ಳಿ ಗೇಟ್ ಬಳಿ ಇರುವ ಪೋದಾರ್ ಇಂಟರ್ ಶಾಲೆಯಲ್ಲಿ ೨೦೦೯-೧೦ನೇ ಸಾಲಿನಲ್ಲಿ ಆರಂಭವಾಗಿದ್ದು, ೨೦೨೪-೨೫ನೇ ಸಾಲಿನಲ್ಲಿ ೧೦ನೇ ತರಗತಿಗೆ ೨೪ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಸದರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶ ಹೊರಬಂದು ಎರಡು ತಿಂಗಳು ಕಳೆದರೂ ಇನ್ನೂ ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣ ಪತ್ರಗಳನ್ನು ನೀಡಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಈಗಾಗಲೇ ಪ್ರಥಮ ಪಿಯುಸಿ ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದಿವೆ. ಕಾಲೇಜಿಗೆ ಮಕ್ಕಳನ್ನು ದಾಖಲು ಮಾಡಿರುವ ಪೋಷಕರು ಟಿಸಿ ಹಾಗೂ ಅಂಕಪಟ್ಟಿಗಾಗಿ ಪೋದಾರ್ ಶಾಲೆಗೆ ಅಲೆದಾಡಿದರೂ ದಾಖಲಾತಿಗಳನ್ನು ನೀಡಿಲ್ಲ ಎಂದು ದೂರಿದ್ದಾರೆ.ಈ ಬಗ್ಗೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವು ಅವರಿಗೆ ಜೂ.೧೩ರಂದು ಹಾಗೂ ಜಿಲ್ಲಾಧಿಕಾರಿಗಳಿಗೆ ಜೂ.೨೫ರಂದು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ಬೇಸತ್ತು ಪೋದಾರ್ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಜು.೪ರಂದು ಬೆಳಿಗ್ಗೆ ೯ ಗಂಟೆಗೆ ಶಾಲೆಯ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಿದ್ದು, ಶಾಲೆಯಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತಿಭಟನೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.ನಿವೇಶನ ರಹಿತ ಬಡ ಉಚಿತ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನ
ಶ್ರೀರಂಗಪಟ್ಟಣ: ಆಶ್ರಯ ಯೋಜನೆಯಡಿ ಪುರಸಭಾ ವ್ಯಾಪ್ತಿ ವಾಸವಾಗಿರುವ ನಿವೇಶನ ರಹಿತ ಬಡ ಕುಟುಂಬಗಳಿಗೆ ಉಚಿತ ನಿವೇಶನ ಹಂಚಿಕೆ ಮಾಡುವ ಸಂಬಂಧ ಟೌನ್ ವ್ಯಾಪ್ತಿಯಲ್ಲಿ 15 ವರ್ಷದಿಂದ ವಾಸವಾಗಿರುವ ನಿವೇಶನ ರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಫಲಾನುಭವಿಗಳು ಜುಲೈ 15ರೊಳಗೆ ಪುರಸಭೆ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08236-252229/ 08236-253030 ಸಂಪರ್ಕಿಸಹುದು.
ಅರ್ಜಿಯೊಂದಿಗೆ ಫಲಾನುಭವಿ ಭಾವಚಿತ್ರ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್, ಪಾನ್ ಕಾರ್ಡ್ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನಕಲು ಪ್ರತಿ, ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದೇ ಭಾಗದಲ್ಲಿ ನಿವೇಶನ/ವಸತಿ ಇಲ್ಲದಿರುವ ಬಗ್ಗೆ 100 ರು.ಗಳ ಛಾಪಾ ಕಾಗದಲ್ಲಿ ದೃಢೀಕರಿಸಿರುವ ನೋಟರಿ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ ಪತ್ರ (ತಾಲೂಕು ಕಚೇರಿಯಿಂದ) ಹಾಗೂ ಅಂಗವಿಕಲರು ಕಡ್ಡಾಯವಾಗಿ ಅಂಗವಿಕಲತೆಯ ಬಗ್ಗೆ ಪಡೆದಿರುವ ಗುರುತಿನ ಚೀಟಿಯನ್ನು ಲಗತ್ತಿಸಿ ಸಲ್ಲಿಸಲು ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.