ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೇಲೆ ಕವಿದ ಕಾರ್ಮೋಡ

| Published : Oct 23 2024, 12:45 AM IST

ಸಾರಾಂಶ

ಕೇವಲ ೯ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಬೇಸರಕ್ಕೆ ಕಾರಣ

ಎಸ್.ಎಂ.ಸೈಯದ್ ಗಜೇಂದ್ರಗಡ

ಜಿಲ್ಲೆಯ ಸಾಹಿತ್ಯ ಕ್ಷೇತ್ರ ಗಟ್ಟಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡರೂ ಸಹ ಸಂಘಟನೆ ಹಾಗೂ ನಡೆದ ಸಮ್ಮೇಳನ ಗಮನಿಸಿದರೆ ಸಾಹಿತ್ಯ ಕ್ಷೇತ್ರ ಸೊರಗುತ್ತಿದೆ ಎಂಬುದಕ್ಕೆ ಜಿಲ್ಲಾ ಮತ್ತು ತಾಲೂಕು ಸಮ್ಮೆಳನಗಳ ಅಂಕಿ-ಸಂಖ್ಯೆಗಳೇ ಸಾಕ್ಷಿ.

iದು ಕನ್ನಡ ಸಾಹಿತ್ಯ ಪರಿಷತ್ ಮೇಲೆ ಸಾಹಿತ್ಯಾಸಕ್ತರ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗುವಂತೆ ಮಾಡಿದೆ.

ಕನ್ನಡ ಸಾಹಿತ್ಯ ಪರಿಷತ್ ಮೂಲಕ ಪ್ರತಿ ವರ್ಷ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳ ಆಯೋಜನೆಗೆ ಬರುತ್ತಿದ್ದ ಅನುದಾನ ಕಳೆದ ಕೆಲ ವರ್ಷಗಳಿಂದ ನಿಂತಿರುವ ಪರಿಣಾಮ ತಾಲೂಕು ಮಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳು ಅಸ್ತಿತ್ವ ಕಳೆದುಕೊಂಡಿವೆ ಎನ್ನುವ ಭಾವ ತಾಲೂಕಿನಲ್ಲಿ ಉದ್ಭವಾಗಿದೆ.

ಇತ್ತ ಜಿಲ್ಲೆ ರಚನೆಗೊಂಡು ೨೬ ವರ್ಷಗಳು ಗತಿಸಿದ್ದರೂ ಸಹ ಇಲ್ಲಿಯವರೆಗೆ ಕೇವಲ ೯ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಕೆಲ ಅಪಸ್ವರಗಳ ನಡುವೆಯೇ ಸಾಹಿತ್ಯ ಸಮ್ಮೇಳನ ನಾಡಿನ ನೆಲ, ಜಲ ಹಾಗೂ ಗಡಿ ರಕ್ಷಣೆ ಸೇರಿ ಕನ್ನಡಿಗರ ಕರ್ತವ್ಯ ಮತ್ತು ಅಸ್ಮಿತೆ ಬಡಿದೆಬ್ಬಿಸುವ ಕಾರ್ಯ ಮಾಡುವ ಜತೆಗೆ ಯುವ ಸಮೂಹಕ್ಕೆ ನಾಡಿನ ಗತವೈಭವ ಸಾಕ್ಷಿಕರಿಸುವ ಸಮ್ಮೇಳನಗಳಾಗಿವೆ. ಇಂತಹ ಸಮ್ಮೇಳನಗಳ ಆಯೋಜನೆಗೆ ಜಿಲ್ಲೆಯಲ್ಲಿ ಹಿನ್ನಡೆಯಾಗುತ್ತಿದ್ದರೂ ಸಹ ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳು ಗಟ್ಟಿ ಧ್ವನಿ ಎತ್ತದಿರುವುದು ದುರ್ದೈವದ ಸಂಗತಿ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮ್ಮೇಳನ ಏರ್ಪಡಿಸುವುದರಿಂದ ಸ್ಥಳೀಯ ಸಾಹಿತ್ಯಾಸಕ್ತರಿಗೆ, ಕಲಾವಿದರಿಗೆ ಪ್ರೋತ್ಸಾಹ ಜತೆಗೆ ಯುವ ಹಾಗೂ ಹಿರಿಯ ಸಾಹಿತಿಗಳಿಗೆ ವೇದಿಕೆ ಮತ್ತು ನಾಡಿನ ಸಾಹಿತ್ಯ, ಕಲೆ ಹಾಗೂ ಪರಂಪರೆಯ ಪರಿಚಯದೊಂದಿಗೆ ಭಾವೈಕ್ಯತೆಯ ವಾತಾವರಣ ನಿರ್ಮಿಸುವುದು ಸಾಹಿತ್ಯ ಸಮ್ಮೇಳನಗಳ ಆಶಯಗಳಲ್ಲಿ ಒಂದಾಗಿದೆ. ಅ.೨೪, ೧೯೯೭ ರಲ್ಲಿ ಗದಗ ಜಿಲ್ಲೆಯಾಗಿ ಮಾರ್ಪಟ್ಟ ಬಳಿಕ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೇವಲ೯ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿವೆ. ೧೦ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜನೆಗಾಗಿ ಕಸಾಪ ಜಿಲ್ಲಾ ಘಟಕ ಕಳೆದ ಕೆಲ ವರ್ಷಗಳಿಂದ ಓಡಾಟ ನಡೆಸಿದ್ದರೂ ಸಹ ಈ ತಿಂಗಳು, ಆ ತಿಂಗಳು ಎನ್ನುತ್ತಾ ಬರುತ್ತಿದೆ. ಇನ್ನೂ ರೋಣ, ಗಜೇಂದ್ರಗಡ ತಾಲೂಕು ಸಾಹಿತ್ಯ ಸಮ್ಮೇಳನ ೪ ಗಡಿ ದಾಟಿಲ್ಲ. ದಿ.ಈಶ್ವರಪ್ಪ ರೇವಡಿ ಕಸಾಪ ತಾಲೂಕಾಧ್ಯಕ್ಷರಾಗಿದ್ದ ವೇಳೆ ರೋಣ ತಾಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಿದ್ದು ಬಿಟ್ಟರೆ, ಮುಂಡರಗಿ, ನರಗುಂದ, ಲಕ್ಷ್ಮೇಶ್ವರದಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ಹೊಸ ತಾಲೂಕು ಕೇಂದ್ರಗಳಲ್ಲಿ ನಿವೇಶನಗಳಿಲ್ಲದ ಪರಿಣಾಮ ಸಂಘಟನೆ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಸೂಕ್ತ ಜಾಗವಿಲ್ಲದಂತಾಗಿದೆ.

ತಾಲೂಕು ಸಮ್ಮೇಳ?: ಸರ್ಕಾರದಿಂದ ವರ್ಷಕ್ಕೆ ಕೇಂದ್ರ ಪರಿಷತ್‌ಗೆ ನೀಡುವ ₹೧೦ ಕೋಟಿಯಲ್ಲಿ ರಾಜ್ಯ ಸಮ್ಮೇಳನಕ್ಕೆ ಅಂದಾಜು ₹ ೫ ಕೋಟಿ ಹೋಗುತ್ತದೆ. ಇನ್ನುಳಿದ ₹೫ ಕೋಟಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ನೀಡಬೇಕಿದೆ. ಜಿಲ್ಲಾ ಸಮ್ಮೇಳನಕ್ಕೆ ₹೫ ಲಕ್ಷ ನೀಡುತ್ತಾರೆ. ಕೇಂದ್ರ ಪರಿಷತ್‌ನಿಂದ ತಾಲೂಕು ಮಟ್ಟದ ಸಮ್ಮೇಳನಗಳಿಗೆ ಕಳೆದ ೨ ವರ್ಷದಿಂದ ಅನುದಾನ ಬಂದಿಲ್ಲ. ತಾಲೂಕಿನಲ್ಲಿ ಸಮ್ಮೇಳನ ನಡೆಸಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಜನರ ಸಹಕಾರ ಪಡೆದು ಸಮ್ಮೇಳನ ನಡೆಸಿ ಎಂಬ ಸೂಚನೆ ಹಿನ್ನಲೆ ತಾಲೂಕು ಸಮ್ಮೇಳನ ನಡೆಸಲು ಕಸಾಪ ಮುಂದಾಗುತ್ತಿಲ್ಲ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.

ಗಜೇಂದ್ರಗಡ ಪ್ರಥಮ ತಾಲೂಕು ಸಮ್ಮೇಳನ ಗೋಗೇರಿ ಗ್ರಾಮದಲ್ಲಿ ನಡೆಸಿ ಎಂದು ಪ್ರತಿ ಸಭೆಯಲ್ಲಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಪರಿಷತ್‌ಗಳಿಗೆ ಹಿಂದಿನಿಂದಲೂ ಮನವಿ ನೀಡುತ್ತಾ ಬಂದರೂ ಸಹ ಸ್ಪಂದನೆ ಸಿಕ್ಕಿಲ್ಲ. ಕೇಂದ್ರದಿಂದ ಅನುದಾನ ಬರದಿದ್ದರೂ ಸ್ಥಳೀಯ ಸಂಪನ್ಮೂಲ ಕ್ರೂಢಿಕರಿಸಿಕೊಂಡು ಬೇರೆಡೆ ತಾಲೂಕು ಸಮ್ಮೇಳನಗಳು ನಡೆಯುತ್ತಿವೆ. ನಮ್ಮಲ್ಲೂ ನಡೆಸಬಹುದು ಎಂದು ಕಸಾಪ ಅಜೀವ ಸದಸ್ಯ ಆರ್.ಕೆ.ಬಾಗವಾನ ಹೇಳಿದರು.ಕಸಾಪ ಜಿಲ್ಲಾ ಸಮ್ಮೇಳನ ನಡೆಸಲು ಅನುದಾನ ಕೊರತೆಯಿಲ್ಲ, ಆದರೆ ತಾಲೂಕು ಸಮ್ಮೇಳನಕ್ಕೆ ಕಳೆದ ೨ ವರ್ಷಗಳಿಂದ ಅನುದಾನ ಬಂದಿಲ್ಲ. ಶೀಘ್ರದಲ್ಲೇ ಗಜೇಂದ್ರಗಡ ಪಟ್ಟಣದಲ್ಲಿ ಜಿಲ್ಲಾ ಸಮ್ಮೇಳನ ನಡೆಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದ್ದಾರೆ.