ಕವಿತೆಗೆ ಕವಿ ಜನ್ಮವನ್ನು ಕೊಟ್ಟರೆ, ಹಾಡುಗಾರ ಅದಕ್ಕೆ ಜೀವಂತಿಕೆಯನ್ನು ತುಂಬುತ್ತಾನೆ.

ಕನ್ನಡಪ್ರಭ ವಾರ್ತೆ, ತುಮಕೂರು ಕವಿತೆಗೆ ಕವಿ ಜನ್ಮವನ್ನು ಕೊಟ್ಟರೆ, ಹಾಡುಗಾರ ಅದಕ್ಕೆ ಜೀವಂತಿಕೆಯನ್ನು ತುಂಬುತ್ತಾನೆ. ಹಾಡುಗಾರರ ಮೂಲಕ ಬಹಳಷ್ಟು ಕವಿಗಳು ಹೆಚ್ಚು ಪ್ರಸಿದ್ಧರಾಗಿದ್ದಾರೆ. ಅವರಲ್ಲಿ ಜಿ.ಎಸ್. ಶಿವರುದ್ರಪ್ಪ, ದ.ರಾ.ಬೇಂದ್ರೆ, ಚೆನ್ನವೀರಕಣವಿ, ಕುವೆಂಪು, ಎಚ್.ಎಸ್. ವೆಂಕಟೇಶಮೂರ್ತಿ, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರು ಪ್ರಮುಖರಾಗಿದ್ದಾರೆ ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಹೇಳಿದರು.ಅವರು ತುಮಕೂರಿನ ಸೃಜನವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಿ. ಲತಾ ಜಿ. ಕುಲಕರ್ಣಿ ಸಾಂಸ್ಕೃತಿಕ ವೇದಿಕೆ, ತುಮಕೂರು ಇವರ ಸಹಯೋಗದಲ್ಲಿ ಕನ್ನಡ ಭವನದಲ್ಲಿ ವಿದ್ಯಾವಾಚಸ್ಪತಿ ದಿ. ಡಾ. ಕವಿತಾಕೃಷ್ಣ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕನ್ನಡ ಕವಿತೆಗಳ ಗೀತಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿಗಳ ಕವಿತೆಗಳು ಹಾಡುಗಾರರ ನಾಲಿಗೆಯ ಮೇಲೆ ನಲಿದಾಡಿದರೆ ಸಾಕು ಬಹಳಷ್ಟು ವರ್ಷಗಳ ಮೂಲಕ ಜನರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಒಳ್ಳೆಯ ಕವಿ ಹಾಗೂ ಒಳ್ಳೆಯ ಹಾಡುಗಾರ ರಸಾನುಭವ ಕೊಡುವುದರ ಮೂಲಕ ಸಹೃದಯನಲ್ಲಿ ಸಾಹಿತ್ಯ ಹಾಗೂ ಸಂಗೀತ ಶಾಶ್ವತವಾಗಿ ಉಳಿಯುತ್ತದೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಜಿಲ್ಲೆಯ ಹೆಮ್ಮೆಯ ಸಾಹಿತಿ ವಿದ್ಯಾವಾಚಸ್ಪತಿ ಕವಿತಾಕೃಷ್ಣರ ಹೆಸರಿನಲ್ಲಿ ಸಮಾನ ಮನಸ್ಕರು ಅವರ ಅಭಿಮಾನಿಗಳು ಸೇರಿ ಟ್ರಸ್ಟ್ ಅನ್ನು ಸ್ಥಾಪಿಸಬೇಕೆಂದು ಇಚ್ಛೆ ಹೊಂದಿದ್ದೇವೆ ಎಂದು ಹೇಳಿದರು.ಪತ್ರಕರ್ತ ಡಾ. ಎಸ್. ನಾಗಣ್ಣ ಮಾತನಾಡಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಕವಿಗಳಿಗೆ ಗಾಯಕರಿಗೆ ಉತ್ತೇಜನ ದೊರಕುತ್ತದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕವಿತಾ ಕೃಷ್ಣರನ್ನು ಸ್ಮರಣೆ ಮಾಡುತ್ತಿರುವುದು ಸಾಕಷ್ಟು ಅರ್ಥವಿದೆ. ಸುಶೀಲಾಸದಾಶಿವಯ್ಯ ಹಾಗೂ ಅವರ ತಂಡ ಕವಿಗಳಿಗೆ ಹಾಗೂ ಗಾಯಕರಿಗೆ ಉತ್ತೇಜಿಸುವ ಉತ್ತಮ ಕಾರ್ಯವನ್ನು ಹಮ್ಮಿಕೊಂಡಿದ್ದು ಯಶಸ್ಸು ಸಿಗಲಿ ಎಂದುಹಾರೈಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ಡಾ. ಧನಿಯಾಕುಮಾರ್‌ರವರು ಮಾತನಾಡಿದರು. ತುಮಕೂರಿನ ಸೃಜನವೇದಿಕೆಯ ಅಧ್ಯಕ್ಷರಾದ ಲೇಖಕಿ ಶ್ರೀಮತಿ ಸುಶೀಲಾಸದಾಶಿವಯ್ಯ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಡಾ. ಎಸ್. ನಟರಾಜ್, ಅಬ್ಬಿನಹೊಳೆ ಸುರೇಶ್ ಉಪಸ್ಥಿತರಿದ್ದರು. ಡಾ. ಕೆ.ಬಿ. ಭರತ್‌ರಾಜ್ ಸ್ವಾಗತಿಸಿದರು. ಜಿ.ಕೆ. ಕುಲಕರ್ಣಿ ವಂದಿಸಿದರು. ಕನ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮದಲ್ಲಿ ಕವಿಗಳಾದ ಜಿ.ಕೆ. ಕುಲಕರ್ಣಿ, ಸಿ.ಎನ್. ಸುಗುಣಾದೇವಿ, ಡಾ. ಕೆ.ಬಿ. ಭರತ್‌ರಾಜ್, ಡಾ. ಎಸ್. ನಟರಾಜ್, ರುದ್ರಮೂರ್ತಿ ಎಲೆರಾಂಪುರ, ಕಮಲಾ ನರಸಿಂಹ, ವಿಪಿ. ಕೃಷ್ಣಮೂರ್ತಿ, ಹರ್ಷ, ಕೃಷ್ಣಾಬಾಯಿ ಹಾಗಲವಾಡಿ, ಪ್ರೇಕ್ಷಾ, ಮುದ್ದೇನಹಳ್ಳಿ ನಂಜಯ್ಯ, ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ, ಡಾ. ಎಸ್.ಪಿ. ಪದ್ಮಪ್ರಸಾದ್, ಜಿ.ಕೆ. ಕುಲಕರ್ಣಿ, ಬಾಪುಜ, ಡಾ. ಕೆ.ಬಿ. ರಂಗಸ್ವಾಮಿ, ಡಾ. ಗಂಗಾದರ ಕೊಡ್ಲಿಯವರ, ಸಿರಿವರ ಶಿವರಾಮಯ್ಯ, ಗಣಪತಿ ಹೆಗಡೆ, ಬಿ.ಸಿ. ಶೈಲಾನಾಗರಾಜ್, ಸುಮಶ್ರೀಹರ್ಷ, ಅಬ್ಬಿನಹೊಳೆ ಸುರೇಶ್ ಮುಂತಾದವರ ಕವಿತೆಗಳಿಗೆ ಸ್ವರ ಸಂಯೋಜಿಸಿ ಗೀತೆಗಳನ್ನು ಹಾಡಲಾಯಿತು.ಗಾಯಕರಾದ ಕುಸುಮ ಜೈನ್, ರುದ್ರಮೂರ್ತಿ ಎಲೆರಾಂಪುರ,ಸಿರಿವರ ಶೀವರಾಮಯ್ಯ, ಜಲಜ ಜೈನ್, ಪಂಕಜಾ ರಾಜಶೇಖರ್, ಉಮಾಮಲ್ಲೇಶ್, ಚಂದನ, ಕನ್ಯಾಕುಮಾರಿ, ಗಂಗಾಲಕ್ಷಿö್ಮ ಮುಂತಾದವರುಹಾಡಿ ಸಭಿಕರನ್ನು ರಂಜಿಸಿದರು.ಈ ಕಾರ್ಯಕ್ರಮದಲ್ಲಿ ತಬಲಾವಾದಕರಾದ ಲೋಕೇಶ್‌ಬಾಬು, ರಿದಂ ಪ್ಯಾಡ್ ವಾದಕರಾದ ಕಾಂತರಾಜು, ಹಾಗೂ ಕೀಬೋರ್ಡ್ ವಾದಕರಾದ ಉಮೇಶ್ ಭಾಗವಹಿಸಿದ್ದರು.