ಕೂಡ್ಲಿಗಿ: ಕವಿತೆಗಳು ಕೇವಲ ಪ್ರಾಸಬದ್ಧವಾಗಿ ಬರೆಯುವುದಲ್ಲ, ತ್ರಾಸು ತೆಗೆದುಕೊಂಡು ರಚಿಸುವುದಲ್ಲ, ತಾನುಂಡ ಅನುಭವಗಳು, ಸಮಾಜದ ಓರೆ-ಕೋರೆಗಳನ್ನು ಸೂಕ್ಷ್ಮ ದೃಷ್ಟಿಕೋನದಿಂದ ನೋಡಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವಂತಿರಬೇಕು. ನಮ್ಮ ಜೀವನದ ಅನುಭವಕ್ಕೆ ತಾಕುವಂತಿರಬೇಕು. ಆಗ ಕವಿತೆ ಕವಿ ಜನರ ಮನದಲ್ಲಿ ಉಳಿಯಲು ಸಾಧ್ಯ ಎಂದು ಕಸಾಪ ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲೂಕಿನ ಹೊಸಹಳ್ಳಿಯಲ್ಲಿ ಕಸಾಪ ಹೊಸಹಳ್ಳಿ ಹೋಬಳಿ ಘಟಕ ಆಯೋಜಿಸಿದ್ದ ಸ್ಥಳೀಯ ಯುವ ಸಾಹಿತಿ, ಹಗರಿಬೊಮ್ಮನಹಳ್ಳಿಯ ಉಪವಲಯ ಅರಣ್ಯಾಧಿಕಾರಿಯಾಗಿರುವ ಕೆ.ಎಂ.ಮಧುಸೂದನ ಅವರ ಚುಕ್ಕಿ ಸಂಭ್ರಮ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಕೆ.ಎಂ.ಮಧುಸೂಧನ ಅವರ ಪ್ರಥಮ ಸಂಕಲನ ಇದಾಗಿರುವುದರಿಂದ ಇತಿಮಿತಿಗಳ ಕೊರತೆಯ ನಡುವೆ ಭರವಸೆಯ ಬೆಳ್ಳಿಗೆರೆ ಮೂಡಿಸಿದ್ದಾರೆ. ಕೆ.ಎಂ.ಮಧುಸೂಧನ ಮೊದಲ ಕವನ ಸಂಕಲನದಲ್ಲಿಯೇ ಕಾವ್ಯ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಪ್ರಾಸದ ಕವಿತೆಗಳು ಓದುಗರನ್ನು ಸೆಳೆಯುತ್ತವೆ. 50ಕ್ಕೂ ಹೆಚ್ಚು ಕವಿತೆಗಳು, 69ಕ್ಕೂ ಹೆಚ್ಚು ಚುಟುಕುಗಳು ಸಾಹಿತ್ಯಾಸಕ್ತರ ಗಮನ ಸೆಳೆಯುತ್ತವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಪಟ್ಟಸಾಲಿ ನೇಕಾರರ ಸಂಘದ ರಾಜ್ಯಾಧ್ಯಕ್ಷ ಎಚ್.ತಿಪ್ಪೇಸ್ವಾಮಿ ಮಾತನಾಡಿ, ಕೆ.ಎಂ.ಮಧುಸೂದನ ಅವರ ಕವಿತೆಗಳಲ್ಲಿ ಕುಟುಂಬ ಪ್ರೀತಿ, ವ್ಯವಸ್ಥೆಯಲ್ಲಿಯ ಕ್ರೌರ್ಯತೆ, ಪ್ರೀತಿ, ಪ್ರೇಮ- ಪ್ರಣಯ ಸೇರಿದಂತೆ ಈ ನೆಲದ ಸೊಗಡನ್ನು ಬಿಂಬಿಸುವ ಗಟ್ಟಿ ಕವಿತೆಗಳಿವೆ. ಮಧುಸೂದನ ಅವರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸಮಯವನ್ನು ಬಿಡುವ ಮಾಡಿಕೊಂಡು ಕವಿತೆಗಳ ರಚನೆಯ ಮೂಲಕ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು. ಮುಂದಿನ ದಿನಗಳಲ್ಲಿ ಅರಣ್ಯ, ಕೖಷಿ, ಪರಿಸರ, ಜೀವವೈವಿಧ್ಯ ಜಗತ್ತಿನ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಈ ನಾಡಿಗೆ ನೀಡಲಿ ಎಂದು ಕಿವಿಮಾತು ಹೇಳಿದರು.

ಕಾನಾಮಡಗು ದಾಸೋಹಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಸಾಹಿತಿ, ನಾಟಕಕ ಎನ್.ಎಂ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕವಿ ಕೆ.ಎಂ. ಮಧುಸೂದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಭೀಮಣ್ಣ ಗಜಾಪುರ ಕೃತಿ ಪರಿಚಯ ಮಾಡಿಕೊಟ್ಟರು. ಮುಖ್ಯ ಅತಿಥಿಗಳಾಗಿ ಹೊಸಹಳ್ಳಿಯ ಹಿರಿಯ ಸಾಹಿತಿ ಯು. ಜಗನ್ನಾಥ, ಕಸಾಪ ಪೋಷಕರಾದ ಎನ್.ಕೆ.ನಾಗೇಂದ್ರಪ್ಪ, ಎ.ಚನ್ನಬಸಪ್ಪ, ಬಳ್ಳಾರಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯು. ನಾಗೇಶ್, ಎ.ಕರಿಬಸಪ್ಪ, ಶ್ಯಾಮಸುಂದರ ಸಫಾರೆ, ಡಾ. ಓಂಕಾರಪ್ಪ, ಸಕಲಾಪುರದಟ್ಟಿಯ ತಿಪ್ಪೀರಮ್ಮ, ಶಾರದಮ್ಮ, ಉಜ್ಜಿನಿ ಭೀಮಣ್ಣ, ಶಿಕ್ಷಕರಾದ ರಾಂಪುರ ನಾಗರಾಜ, ಮಹೇಶ್, ಮಂಜಣ್ಣ, ಯು.ಜಿ.ತಿಪ್ಪೇಶ, ದಯಾನಂದ ಸಜ್ಜನ್, ಪೊಲೀಸ್ ಇಲಾಖೆಯ ವಿಜಯಕುಮಾರ್, ಜನಾರ್ದನ, ಬಿಸಿಎಂ ವಸತಿನಿಲಯ ಮೇಲ್ವಿಚಾರಕಿಯಾದ ಸುಮಾ, ಮಂಜುಳಾ ಮಧುಸೂದನ ಸೇರಿದಂತೆ ಹಲವಾರು ಸಾಹಿತಿಗಳು ಉಪಸ್ಥಿತರಿದ್ದರು. ಎ.ಎನ್. ಕೖಷ್ಣಮೂರ್ತಿ ಪ್ರಾರ್ಥಿಸಿದರು. ಕೆ.ನಾಗರಾಜ ಸ್ವಾಗತಿಸಿದರು. ಶಿಕ್ಷಕ ಮಹೇಶ್ ನಿರೂಪಿಸಿದರು.