ಕವಿ ದಿನಕರ ದೇಸಾಯಿ ಅಪ್ಪಟ ಸಮಾಜವಾದಿ: ಡಾ. ವಸ್ತ್ರದ

| Published : Sep 11 2024, 01:03 AM IST

ಸಾರಾಂಶ

ದಿನಕರ ದೇಸಾಯಿಯವರು ಜಿಲ್ಲೆಯಲ್ಲಿ ಜನತಾ ವಿದ್ಯಾಲಯಗಳೆಂಬ ಅಕ್ಷರ ದೇಗುಲಗಳನ್ನು ನಿರ್ಮಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿದರು.

ಅಂಕೋಲಾ: ಕಾಗೋಡು ಭೂ ಹೋರಾಟಕ್ಕೆ ಪ್ರೇರಣೆ ನೀಡಿದ ಗೇಣಿದಾರರ ಚಳವಳಿಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸಿದ ದೇಸಾಯಿಯವರು ಜನತಾಂತ್ರಿಕ ಸಮಾಜವಾದಿ ಆಗಿದ್ದರು ಎಂದು ಜಿಸಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ತಿಳಿಸಿದರು.ಮಂಗಳವಾರ ಪಟ್ಟಣದ ಜಿಸಿ ಕಾಲೇಜಿನಲ್ಲಿ ದಿನಕರ ಪ್ರತಿಷ್ಠಾನ ಸಹಯೋಗದಲ್ಲಿ ಏರ್ಪಡಿಸಿದ್ದ ಕವಿ ದಿನಕರ ದೇಸಾಯಿಯವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಮೋಹನ ಹಬ್ಬು ಮಾತನಾಡಿ, ದಿನಕರ ದೇಸಾಯಿಯವರು ಜಿಲ್ಲೆಯಲ್ಲಿ ಜನತಾ ವಿದ್ಯಾಲಯಗಳೆಂಬ ಅಕ್ಷರ ದೇಗುಲಗಳನ್ನು ನಿರ್ಮಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿದರು ಎಂದರು. ಕವಿವಿ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ ಮಾತಾಡಿ, ದಿನಕರ ಅವರು ದೀನ- ದಲಿತರ ಬಾಳನ್ನು ಬೆಳಗಿದ ಮಹಾನ್ ಚೇತನ ಎಂದರು. ಕೆನರಾ ವೆಲ್ಫೇರ್ ಟ್ರಸ್ಟಿನ ಆಡಳಿತಾಧಿಕಾರಿ ರವೀಂದ್ರ ಕೇಣಿ ಮಾತನಾಡಿ, ದಿನಕರರ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಶಿವಾನಂದ ನಾಯಕ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ದಿನಕರ ಪ್ರತಿಷ್ಠಾನದ ಪದಾಧಿಕಾರಿಗಳು, ನೂರಾರು ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಲೇಜು ಆವರಣದಲ್ಲಿರುವ ದಿನಕರರ ಪ್ರತಿಮೆಗೆ ಅತಿಥಿ ಮಹನಿಯರು ಮಾಲಾರ್ಪಣೆ ಮಾಡಿದರು. ಪೂರ್ಣಿಮಾ ಮುಕ್ರಿ ದಿನಕರ ವಿರಚಿತ ಭಾವಗೀತೆ ಹಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸುಜಾತಾ ಲಾಡ ಸ್ವಾಗತಿಸಿದರು. ಸ್ಟಾಪ್ ಸೆಕ್ರೆಟರಿ ಆರ್.ಪಿ. ಭಟ್ ಪರಿಚಯಿಸಿದರು, ಗ್ರಂಥಪಾಲಕ ನಂಜುಂಡಯ್ಯ ವಂದಿಸಿದರು.ವಿಜೇತರಿಗೆ ಬಹುಮಾನ

ದಿನಕರರ ಚುಟುಕು ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಾದ ಭಾವನಾ ನಾಯಕ, ರಕ್ಷಿತಾ ನಾಯಕ ಅಮೃತೇಶ್ವರಿ ಲಕ್ಷ್ಮೇಶ್ವರ, ದೀಕ್ಷಾ ಹರಿಕಂತ್ರ, ಹರ್ಷಿತಾ ಘಾಟಿಮನಿ, ರಕ್ಷಾ ಹಾರವಾಡೇಕರ ಅವರಿಗೆ ನಗದು ಬಹುಮಾನ ನೀಡಲಾಯಿತು.