ಸಾರಾಂಶ
ತಾಲೂಕು ಕಸಾಪ ಆಶ್ರಯದಲ್ಲಿ ಎಸ್.ಸಿ.ಪರಮೇಶ್ವರ ಭಟ್ ಬದುಕು, ಸಾಹಿತ್ಯ ಮತ್ತು ಚಿಂತನೆ ಬಗ್ಗೆ ದತ್ತಿ ಉಪನ್ಯಾಸ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕವಿ ಪರಮೇಶ್ವರ ಭಟ್ಟರು ಕನ್ನಡ ನವೋದಯ ಕಾಲದ ವಿದ್ವಾಂಸರು, ಬರಹಗಾರರು, ಉತ್ತಮ ವಾಗ್ಮಿಯಾಗಿದ್ದರು ಎಂದು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.
ಶನಿವಾರ ತಾಲೂಕು ಕಸಾಪ ಆಶ್ರಯದಲ್ಲಿ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ಎಚ್.ಎಸ್.ಚಂದ್ರಶೇಖರ್ ಮನೆ ಅಂಗಳದಲ್ಲಿ ಎಚ್.ಸೂರ್ಯನಾರಾಯಣ ರಾವ್ ಕಮಲಮ್ಮ ಅವರ ದತ್ತಿ ಉಪನ್ಯಾಸದಲ್ಲಿ ಕವಿ ಎಸ್.ವಿ.ಪರಮೇಶ್ವರ ಭಟ್ ಅವರ ಬದುಕು, ಸಾಹಿತ್ಯ ಮತ್ತು ಚಿಂತನೆ ಕುರಿತು ಉಪನ್ಯಾಸ ನೀಡಿದರು. ಪರಮೇಶ್ವರ ಭಟ್ಟರು ಸಂಸ್ಕೃತದ ಮಹಾ ಕಾವ್ಯ ಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವರು ಬರೆದ ಕಾವ್ಯ, ನಾಟಕ, ಗೀತೆ,ವಚನ,ಗಾದೆಗಳು, ಒಗಟುಗಳು ಎಲ್ಲವೂ ಕನ್ನಡ ಸಾಹಿತ್ಯ ರಂಗಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ ಎಂದರು.ರಾಗಿಣಿ, ಗಗನ ಚುಕ್ಕಿ, ಕೃಷ್ಣ ಮೇಘ ಅವರ ಪ್ರಮುಖ ಕವನ ಸಂಗ್ರಹ. ಇಂದ್ರಚಾಪ, ತುಂಬೆ ಹೂ ಮುಂತಾದ ಮುಕ್ತಕ ರಚನೆ ಮಾಡಿದ್ದಾರೆ. ಉಪ್ಪು ಕಡಲು, ಪಾಮರ ಅವರ ವಚನ ಸಂಗ್ರಹವಾಗಿದೆ. ಪರಮೇಶ್ವರ ಭಟ್ಟರ ಮೂಲ ಊರು ಶೃಂಗೇರಿಯ ವಿದ್ಯಾರಣ್ಯಪುರ. ಪರಮೇಶ್ವರ ಭಟ್ಟರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಬಂದಿದ್ದರೂ ರಾಷ್ಟ್ರಕವಿ ಪಟ್ಟಸಿಗದಿರುವುದು ಮಾತ್ರ ದುರದೃಷ್ಠಕರ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ದತ್ತ ಉಪನ್ಯಾಸ ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಅವಿಭಾಜ್ಯ ಅಂಗ. ತಮ್ಮ ಪ್ರೀತಿ ಪಾತ್ರರ ಹೆಸರಿಗೆ ಹಣ ಇಟ್ಟು ಆ ಬಡ್ಡಿ ಹಣದಲ್ಲಿ ವರ್ಷ ಕ್ಕೊಮ್ಮೆ ದತ್ತಿ ಉಪನ್ಯಾಸ ಕಾರ್ಯಕ್ರಮ ಮಾಡಲಾಗುವುದು. ಈಗಾಗಲೇ ಕಸಾಪ ದಿಂದ ದತ್ತಿ ಉಪನ್ಯಾಸ, ಒಗಟು ಸ್ಪರ್ಧೆ, ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಸಮ್ಮೇಳನ, ತಾಲೂಕು ಸಮ್ಮೇಳನ ನಡೆಸಲಾಗುವುದು ಎಂದರು.ಕನ್ನಡ ಪಂಡಿತ ವಿ.ಎಸ್.ಕೃಷ್ಣಭಟ್ ಮಾತನಾಡಿ, ಬಿಎಂಶ್ರೀ, ಎ.ಆರ್. ಕೃಷ್ಣ ಶಾಸ್ತ್ರಿ ಅವರ ಆಶಯದಂತೆ ಕನ್ನಡ ತಾಯಿ ಆರಾಧನೆ ಹಾಗೂ ಕನ್ನಡ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕನ್ನಡಕ್ಕಾಗಿ ಶ್ರಮಿಸಿದ ಲೇಖಕರು, ಕವಿಗಳು, ನಾಟಕಕಾರರನ್ನು ಸ್ಮರಿಸುವ ಉದ್ದೇಶದಿಂದ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗುವುದು ಎಂದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಅತಿಥಿಗಳಾಗಿ ಕಸಾಪ ಹೋಬಳಿ ಘಟಕದ ಮಾಜಿ ಅಧ್ಯಕ್ಷೆ ಜುಬೇದ, ಹಿರಿಯ ಸಾಹಿತಿ ಜಯಮ್ಮ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ದಿನೇಶ್, ಕಸಾಪ ಜಿಲ್ಲಾ ಸಂಚಾಲಕ ನಂಜುಂಡಪ್ಪ, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಇದ್ದರು.