ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕವಿ ಪುತಿನರ ಸಾಹಿತ್ಯ ಹಾಗೂ ಹೆಸರನ್ನು ಪ್ರಚಾರ ಮಾಡುವುದರಿಂದ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಪುತಿನ ಟ್ರಸ್ಟ್ ನೂತನ ಅಧ್ಯಕ್ಷ ಪ್ರೊ.ಕೃಷ್ಣೇಗೌಡ ತಿಳಿಸಿದರು.ಮೇಲುಕೋಟೆಯಲ್ಲಿ ಭಾನುವಾರ ಅಧ್ಯಕ್ಷರಾಗಿ ಪದ ಗ್ರಹಣ ಮಾಡಿ ಮಾತನಾಡಿ, ಪುತಿನ ಕಾವ್ಯ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಅವರ ಹೆಸರು ನಿತ್ಯ ನೂತನವಾಗಿರುವಂತೆ ಕಾರ್ಯಕ್ರಮಗಳನ್ನು ಟ್ರಸ್ಟ್ ರೂಪಿಸುತ್ತದೆ ಎಂದರು.
ಕವಿ ಪುತಿನರ ಸಾಹಿತ್ಯದಿಂದ ನಾಡಿಗೆ ಕೊಡುಗೆಯಾಗಬೇಕಿದೆ. ಕವಿಗಳಾದ ಕುವೆಂಪು, ಬೇಂದ್ರೆ ಪುತಿನ ನವೋದಯ ಸಾಹಿತ್ಯದ ರತ್ನತ್ರಯರು. ಪುತಿನ ಸಾಹಿತ್ಯದ ಅಧ್ಯಯನ ಮಾಡಿದರೆ ಅವರ ಕಾವ್ಯದ ಚಿಂತನೆಗಳು ಅರ್ಥವಾಗುತ್ತದೆ ಎಂದರು.ಬದುಕು ಲಘುವಾಗಿರಬೇಕು ಎಂಬ ಅವರ ಕಾವ್ಯ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ. ಅವರ ಆಧ್ಯಾತ್ಮಿಕ ಹಾಗೂ ವೈಚಾರಿಕ ಚಿಂತನೆಗಳು ರಸಮಯ ಕಾವ್ಯಸ್ವರೂಪ ಪಡೆದುಕೊಂಡಿವೆ. ಹೀಗಾಗಿ ಅವರ ವಿಚಾರಧಾರೆಗಳು ಸಮಾಜಮುಖಿಯಾಗಿದ್ದು ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಇಂಗ್ಲಿಷ್‌ನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಪುತಿನ ಬ್ರಿಟಿಷರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಇಂಗ್ಲಿಷ್‌ನಲ್ಲಿ ಸಾಹಿತ್ಯ ಕೃಷಿ ಮಾಡಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದ್ದರು. ಆದರೆ, ಸ್ವಾರ್ಥ ಬಯಸದ ಪುತಿನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಕರುನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.ಯಾವುದೇ ಅಧಿಕಾರವಿಲ್ಲದೆ ಶಿಕ್ಷಕನಾಗಿ ಸೇವೆ ಮಾಡಿದ ನಾನು ಸಮಾಜಕ್ಕೆ ಅಳಿಲುಸೇವೆ ಮಾಡಿದ್ದೇನೆ. ಪುತಿನ ಟ್ರಸ್ಟ್ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಪುತಿನ ಸಾಹಿತ್ಯವನ್ನು ಪ್ರಚಾರ ಮಾಡುವ ಮೂಲಕ ಭಾಷಾ ಬೆಳವಣಿಗೆಗೆ ಸೇವೆಮಾಡುವ ಆಶಯ ನಮ್ಮದಾಗಿದೆ ಎಂದರು.
ಪುತಿನ ವ್ಯಾಸಂಗ ಮಾಡಿದ ಮಹತ್ವವಿರುವ ಶತಮಾನದ ಸರ್ಕಾರಿ ಶಾಲೆಯನ್ನು ಬಲವರ್ಧನೆ ಮಾಡುವ ಕೆಲಸವನ್ನು ಟ್ರಸ್ಟ್ ಮಾಡಲಿದೆ. ಈ ಶಾಲೆಯಿಂದಲೇ ಪುತಿನ ವಿಚಾರ ಚಿಂತನೆಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯ ಆರಂಭಿಸಲಾಗುತ್ತದೆ. ಜೊತೆಗೆ ಶಾಲೆಯನ್ನು ಮಾದರಿಯಾಗಿ ರೂಪಿಸಲು ಸಹಕಾರ ನೀಡಲಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುತಿನ ಪುತ್ರಿ ಹಾಗೂ ಖ್ಯಾತ ಸಾಹಿತಿ ಅಲಮೇಲು ಮಾತನಾಡಿ, ಅಮೆರಿಕಾದಲ್ಲಿ ಪುತಿನ ಗೀತ ರೂಪಕಗಳಿಗೆ ದೃಶ್ಯ ವೈಭವವವನ್ನು ನೀಡಿ ಪ್ರದರ್ಶಿಸುವ ಕಾರ್ಯ ಮಾಡಲಾಗುತ್ತದೆ. ಅಲ್ಲಿ ಕನ್ನಕ ಸಂಘ ಮಾಡಿ ನಿರಂತರವಾಗಿ ಕನ್ನಡ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕನ್ನಡ ಸಂಘದಲ್ಲಿ 2 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಖ್ಯಾತಿ ಪಡೆದಿರುವ ಪ್ರೊ.ಕೃಷ್ಣೇಗೌಡ ಸಾರಥ್ಯದಲ್ಲಿ ಮೇಲುಕೋಟೆ ಹಾಗೂ ನಾಡಿನಲ್ಲಿ ಪುತಿನ ಕೃತಿ ಸಾಹಿತ್ಯದ ವಿಚಾರಧಾರೆಗಳನ್ನು ಪ್ರಚಾರ ಮಾಡುವ ಕಾರ್ಯ ಹೆಚ್ಚಿನ ಮಟ್ಟದಲ್ಲಿ ನಡೆಯಲಿ ಎಂದು ಹಾರೈಸಿದರು.ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಹಾಗೂ ಮಂಡ್ಯದ ಎಸ್.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ. ಕವಿ ಪುತಿನ ಟ್ರಸ್ಟ್ ಸದಸ್ಯರಾದ ಬಿ.ಎನ್ ಸುರೇಶ್, ಡಾ.ಸುಮಾರಾಣಿ ಶಂಭು, .ಕೆ.ಜಿ. ನಾರಾಯಣ, ಕೊಪ್ಪಕುಮಾರ್, ಟಿ.ಚಂದ್ರೇಗೌಡ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.