ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಎಚ್‌ಕೆಎಸ್ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ‘ಕಾವ್ಯ ಪರ್ವ’ ಕಾರ್ಯಕ್ರಮ ನಡೆಯಿತು.

ಕಾರ್ಕಳ ; ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಎಚ್‌ಕೆಎಸ್ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ‘ಕಾವ್ಯ ಪರ್ವ’ ಕಾರ್ಯಕ್ರಮ ನಡೆಯಿತು.ಹಾಸ್ಯಕವಿ ಹಾಗೂ ನಾಟಕಕಾರ ಎಚ್. ಡುಂಡಿರಾಜ್ ಅವರ 100ನೇ ಕೃತಿ ‘ಕಾವ್ಯ ಡುಂಡಿಮ’ ಹಾಗೂ ಅವರ 70ನೇ ವರ್ಷದ ಅಭಿನಂದನಾ ಕಾರ್ಯಕ್ರಮ, ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರ ‘ಸಾವೇ ಬೀಗಬೇಡ’ ಮತ್ತು ‘ಓಶೋ ರಜನೀಶ್ ನಿಜರೂಪ’ ಕೃತಿಗಳ ಬಿಡುಗಡೆ ಹಾಗೂ 80ನೇ ವರ್ಷದ ಅಭಿನಂದನೆ ಕಾರ್ಯಕ್ರಮದಲ್ಲಿ ನಡೆಯಿತು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಮಾತನಾಡಿ, ಕ್ರಿಯೇಟಿವ್ ಪುಸ್ತಕ ಮನೆ ಮೂಲಕ ನಾಡಿನ ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ ಎಂದರು.ಸಾಹಿತಿ, ವಿಮರ್ಶಕ ಹಾಗೂ ಅಧ್ಯಾಪಕ ಡಾ. ಎಚ್.ಎಸ್. ಸತ್ಯನಾರಾಯಣ ಅವರು ಬಿ.ಆರ್. ಲಕ್ಷ್ಮಣರಾವ್ ಅವರನ್ನು ಕೆ.ಎಸ್. ನರಸಿಂಹಸ್ವಾಮಿ ಅವರ ಪರಂಪರೆಯ ಮುಂದುವರಿದ ಪ್ರೇಮಕವಿ ಎಂದು ಪರಿಚಯಿಸಿದರು.

ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ಇಂಗ್ಲಿಷ್ ಭಾಷೆ ನಮ್ಮ ನಾಡಿನಲ್ಲಿ ಭಾಷೆಗಿಂತ ಪ್ರತಿಷ್ಠೆಯಾಗಿ ಬೆಳೆಯುತ್ತಿರುವುದು ವಿಷಾದನೀಯ. ಕನ್ನಡವನ್ನು ಶ್ರೀಮಂತಗೊಳಿಸುವ ಉದ್ದೇಶದಿಂದಲೇ ವಿವಿಧ ಭಾಷೆಗಳನ್ನು ಕಲಿತಿದ್ದೇನೆ ಎಂದರು.

ಎಚ್. ಡುಂಡಿರಾಜ್ ಮಾತನಾಡಿ, ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸಿರುವ 100ನೇ ಕೃತಿ ತಮ್ಮ ‘ಕಾವ್ಯ ಡುಂಡಿಮ’ ಆಗಿರುವುದು ಸಂತಸ ತಂದಿದೆ ಎಂದರು. ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿದರು. ಬೆಂಗಳೂರಿನ ಗಾಯಕರಾದ ಪಂಚಮ್ ಹಳಿಬಂಡಿ ಹಾಗೂ ಚಿನ್ಮಯಿ ಚಂದ್ರಶೇಖರ್ ಅವರು ಸಾಹಿತಿಗಳ ರಚನೆಯ ಕವನಗಳನ್ನು ಗಾಯನ ಮಾಡಿದರು. ಅವಿನಾಶ್ ಕಾಮತ್ ಕಾವ್ಯ ದಿಗ್ಗಜರೊಂದಿಗೆ ಸಂವಾದ ನಡೆಸಿಕೊಟ್ಟರು.ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಎ., ಉಪಪ್ರಾಂಶುಪಾಲ ಲೋಕೇಶ್ ಪೂಜಾರಿ ಇದ್ದರು. ಕನ್ನಡ ಉಪನ್ಯಾಸಕ ರಮೇಶ್ ಎಂ. ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.