ಸಾರಾಂಶ
ಹಾವೇರಿ: ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ದೇಶಪ್ರೇಮವನ್ನು ಸಾರುವ ಹುತಾತ್ಮರ ಸ್ಮರಣೆಯ ಕವಿಗೋಷ್ಠಿ ಮತ್ತು ದೇಶಭಕ್ತಿ ಹಾಡುಗಾರಿಕೆ ಕಾರ್ಯಕ್ರಮ ನಗರದ ವೀರಸೌಧದಲ್ಲಿ ಜರುಗಿತು. ಹುತಾತ್ಮ ಮೈಲಾರ ಮಹಾದೇವ, ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ತ್ರಿವಳಿ ಸ್ವಾತಂತ್ರ್ಯ ಯೋಧರ ಪುಣ್ಯಸ್ಮರಣೆಯ ದಿನದಂದು ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಹದಿನಾಲ್ಕು ಕವಿಗಳು ಭಾಗವಹಿಸಿದ್ದರು.ಸಿ.ಎಸ್. ಮರಳಿಹಳ್ಳಿ ಅವರ ಕಾವ್ಯವಾಚನದೊಂದಿಗೆ ಕವಿಗೋಷ್ಠಿ ಆರಂಭವಾಯಿತು. ಶಿವಯೋಗಿ ಚರಂತಿಮಠ, ಜುಬೇದಾ ನಾಯಕ್, ಜ್ಯೋತಿ ಬಿ. ಶೆಟ್ಟಿಯವರ, ಸುಭಾಸ ಮಡಿವಾಳರ, ಸಂತೋಷ ಪಿಸೆ, ಗೀತಾ ಸಾಲಿಮಠ, ರಾಜೇಶ್ವರಿ ಹರವಿಶೆಟ್ಟರ, ರಾಜೇಂದ್ರ ಹೆಗಡೆ, ಅಕ್ಕಮಹಾದೇವಿ ಹಾನಗಲ್ಲ ಕಾವ್ಯ ವಾಚನ ಮಾಡಿದರೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡಿವೆಪ್ಪ ಕುರಿಯವರ ಮತ್ತು ಹನುಮಂತಪ್ಪ ಧಾರವಾಡ ದೇಶಭಕ್ತಿ ಗೀತೆಗಳನ್ನು ಹಾಡಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಸತೀಶ ಕುಲಕರ್ಣಿ ವಹಿಸಿದ್ದರು. ಮೈಲಾರ ಮಹಾದೇವಪ್ಪನವರ ಮೊಮ್ಮಗ ಎಚ್.ಎಸ್. ಮಹಾದೇವ, ಮರಿ ಮೊಮ್ಮಕ್ಕಳಾದ ವಚನ ಮತ್ತು ಶಶಾಂಕ, ಮಾನವ ಬಂಧುತ್ವ ವೇದಿಕೆಯ ರುದ್ರಮುನಿ, ಮಾಜಿ ಸೈನಿಕರಾದ ಚಂದ್ರಶೇಖರ ಶಿಸನಳ್ಳಿ, ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಇತರರು ವೇದಿಕೆಯಲ್ಲಿದ್ದರು. ಕವಿಗೋಷ್ಠಿಯನ್ನು ಅನಿತಾ ಹರನಗಿರಿ ನಡೆಸಿಕೊಟ್ಟರು.ಚೌಡಯ್ಯದಾನಪುರದ ಕರ್ತೃ ಗದ್ದುಗೆ ಅಭಿವೃದ್ಧಿಗೂ ಕ್ರಮ
ಹಾವೇರಿ: ಅಂಬಿಗರ ಚೌಡಯ್ಯನವರ ಗುರುಪೀಠದ ಮಾದರಿಯಂತೆ ಚೌಡಯ್ಯದಾನಪುರದಲ್ಲಿರುವ ಕರ್ತೃ ಗದ್ದುಗೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಮಾಜದವರು ಸಹಕರಿಸಬೇಕು ಹಾಗೂ ಯಾರ ಮಾತಿಗೂ ಕಿವಿಗೊಡಬಾರದು ಎಂದು ಜಿಲ್ಲಾ ಗಂಗಾಮತಸ್ಥರ ಸಮಾಜದ ಅಧ್ಯಕ್ಷ ಮಂಜುನಾಥ ಭೋವಿ ಮನವಿ ಮಾಡಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಂಬಿಗರ ಚೌಡಯ್ಯನವರ ಗುರುಪೀಠ ಸಮಾಜದ ಏಕೈಕ ಪೀಠವಾಗಿದೆ. ಅಂಬಿಗರ ಚೌಡಯ್ಯನವರ ಗುರುಪೀಠದ ಅಭಿವೃದ್ಧಿ ಹಾಗೂ ಕರ್ತೃ ಗದ್ದುಗೆ ಅಭಿವೃದ್ಧಿ ಮಾಡುವ ಸಂಬಂಧ ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ಸಲ್ಲಿಸಲಾಗಿದೆ. ಸಮಾಜದ ನಿರಂತರ ಹೋರಾಟದ ಫಲವಾಗಿ 2013- 14ರಲ್ಲಿ ಪೀಠದ ಅಭಿವೃದ್ಧಿಗಾಗಿ ₹32 ಕೋಟಿ ಅನುದಾನ ಹಾಗೂ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ ಎಂದರು.ಸರ್ಕಾರದಿಂದ ಮಂಜೂರಾದ ಅನುದಾನ ಕಾರಣಾಂತರಗಳಿಂದ ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಹಿಂದಕ್ಕೆ ಹೋಗಿದ್ದು, ಗದ್ದುಗೆ ಅಭಿವೃದ್ಧಿಪಡಿಸಲು ಆಗಿಲ್ಲ. ಮೇಲಾಗಿ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ 100 ಮೀಟರ್‌ವರೆಗೆ ಯಾವುದೇ ಕೆಲಸ ಮಾಡಿಸಲು ತೊಂದರೆಯಾಗುತ್ತಿದೆ. ಈಗಾಗಲೆ ಗುರುಪೀಠ ಹಾಗೂ ಕರ್ತೃ ಗದ್ದುಗೆಯ ಅಭಿವೃದ್ಧಿಗೋಸ್ಕರ ಶಾಸಕರು, ಸಚಿವರು ಅವೇಶನದಲ್ಲಿ ಚರ್ಚಿಸಿ, ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಾನೂನು ಸಚಿವ ಎಚ್.ಕೆ. ಪಾಟೀಲರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.ಜಿಲ್ಲೆಯಲ್ಲಿ ಸಮಾಜದ ಅಭಿವೃದ್ಧಿ ಹಾಗೂ ಗುರುಪೀಠದ ಏಳ್ಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೇವಲ ಗುರುಪೀಠದ ಅಭಿವೃದ್ಧಿ ಮಾಡುತ್ತಾ ಹೋಗುತ್ತಿದ್ದಾರೆ. ಆದರೆ ಚೌಡಯ್ಯದಾನಪುರದಲ್ಲಿರುವ ಗದ್ದುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಜನರ ದಾರಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿತಾಸಕ್ತಿಗಳು ಸಮಾಜದಲ್ಲಿ ಒಡಕನ್ನು ಸೃಷ್ಟಿಸಿ, ಜನರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ.ಗಂಗಾಮತಸ್ಥ ಸಮಾಜವು ಒಗ್ಗಟ್ಟಿನಿಂದ ಕೂಡಿದೆ. ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ ಬದ್ಧವಾಗಿದ್ದು, ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇವೆ. ಎರಡು ಸ್ಥಳಗಳ ಅಭಿವೃದ್ಧಿ ಮಾಡುತ್ತಾ ಸಮಾಜದ ಪರವಾಗಿ ಕೆಲಸ ಮಾಡುತ್ತಿದ್ದು, ಯಾರೂ ಅನ್ಯರ ಮಾತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಪ್ರವೀಣ ವಡ್ನಿಕೊಪ್ಪ ಮಾತನಾಡಿದರು. ರಾಮಚಂದ್ರಪ್ಪ ಐರಣಿ, ಎಚ್.ಎಂ. ದಂಡಿನ, ಕರಬಸಪ್ಪ ಹಳದೂರ, ನಾಗಪ್ಪ ಶೇಷಗಿರಿ, ಅಣ್ಣಪ್ಪ ಚಾಕಾಪುರ, ಮಾಲತೇಶ ತಿಪ್ಪೇಗುಂಡಿ, ನಿಂಗಪ್ಪ ಹೆಗ್ಗಣ್ಣವರ, ಕಾಳಪ್ಪ ಅಂಬಿಗೇರ, ಕೋಟ್ರೆಶಪ್ಪ ಕುದರಿಹಾಳ, ಪರಮೇಶಪ್ಪ ಚಿಕ್ಕಮ್ಮನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.