ಕವಿತೆಗೆ ಕರುಳು ಇರಬೇಕು. ಅಂದರೆ, ಅದು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡಿರಬೇಕು

ಬಳ್ಳಾರಿ: ಕವಿತೆ ಎಂಬುದು ಕೇವಲ ಭಾವನೆಗಳ ಅಭಿವ್ಯಕ್ತಿಯಲ್ಲ; ಅದು ಸಮಾಜವನ್ನು ಸಂಸ್ಕರಿಸುವ, ಮನುಷ್ಯನ ಬದುಕಿಗೆ ಹೊಸ ಅರ್ಥ ನೀಡುವ ಶಕ್ತಿಯುತ ಮಾಧ್ಯಮವಾಗಿದೆ. ಎಲ್ಲ ಕಾಲಘಟ್ಟಗಳಲ್ಲಿಯೂ ಕವಿತೆ ಈ ನೆಲವನ್ನು ವಿಭಿನ್ನ ರೀತಿಯಲ್ಲಿ ಸಂಸ್ಕರಿಸುತ್ತಾ ಬಂದಿದೆ. ಕವಿಯೊಬ್ಬ ಕವಿತೆ ಬರೆದ ಬಳಿಕ ಅದರಲ್ಲಿ ಮಾನವೀಯ ಸಂವೇದನೆ, ಸಾಮಾಜಿಕ ಕಾಳಜಿ ಹಾಗೂ ಜನರ ಬದುಕಿನ ನೋವು-ನಲಿವುಗಳು ಪ್ರತಿಫಲಿಸುತ್ತಿವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಿರಿಯ ಲೇಖಕ ಜಾಜಿ ದೇವೇಂದ್ರಪ್ಪ ಹೇಳಿದರು.

ಇಲ್ಲಿನ ರಾಘವ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 23ನೇ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಂಜೆ ಜರುಗಿದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವಿತೆಗೆ ಕರುಳು ಇರಬೇಕು. ಅಂದರೆ, ಅದು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡಿರಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಶೋಷಿತರ ನೋವಿಗೆ ಧನಿಯಾಗುವ ಮತ್ತು ಸಮಾಜದ ತಲ್ಲಣ ಅಭಿವ್ಯಕ್ತಿಸುವ ಕವಿತೆ ಮಾತ್ರ ನಿಜವಾದ ಅರ್ಥದಲ್ಲಿ ಜನಮುಖಿ ಕವಿತೆಯಾಗಲು ಸಾಧ್ಯ. ಕವಿತೆಯಲ್ಲಿ ಕೇವಲ ಪದಗಳ ಅಲಂಕಾರ, ಭಾಷೆಯ ಸೌಂದರ್ಯವಿದ್ದರೆ ಸಾಲದು; ಅದರೊಳಗೆ ಮನುಷ್ಯತ್ವದ ಮಿಡಿತವೂ ಇರಬೇಕು ಎಂದು ಹೇಳಿದರು.

ಕವಿಯು ಮತ್ತೆ ಮತ್ತೆ ಕವಿತೆ ಬರೆಯುವಾಗ ತಾನು ಏನು ಬರೆಯುತ್ತಿದ್ದೇನೆ ಮತ್ತು ಯಾರಿಗಾಗಿ ಬರೆಯುತ್ತಿದ್ದೇನೆ ಎಂಬ ಸ್ಪಷ್ಟ ಅರಿವು ಹೊಂದಿರಬೇಕು. ಬರವಣಿಗೆಯ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವಿದ್ದಾಗ ಮಾತ್ರ ಕವಿತೆ ಸಮಾಜದೊಂದಿಗೆ ಸಂವಾದ ನಡೆಸಲು ಸಾಧ್ಯ. ಜನರ ಬದುಕಿಗೆ ಹತ್ತಿರವಾಗುವ ಕವಿತೆಗಳು ಕಾಲದ ಪರೀಕ್ಷೆಯಲ್ಲಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.

ಲೇಖಕಿ ಎ.ಎಂ. ಜಯಶ್ರೀ ಆಶಯ ನುಡಿಗಳನ್ನಾಡಿದರು. ಲೇಖಕ ವೀರೇಂದ್ರ ರಾವಿಹಾಳು ಉಪಸ್ಥಿತರಿದ್ದರು. ಅಖಂಡ ಜಿಲ್ಲೆಯ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಸಾಹಿತ್ಯ ಸಮಕಾಲೀನ ಸ್ಥಿತ್ಯಂತರಗಳು ಕುರಿತು ವಿಚಾರಗೋಷ್ಠಿಯಲ್ಲಿ ಡಾ. ಯು.ಶ್ರೀನಿವಾಸಮೂರ್ತಿ ಆಶಯ ನುಡಿಗಳನ್ನಾಡಿದರು. ಸಾಹಿತ್ಯದ ಮತ್ತು ಯುವ ಸ್ಪಂದನೆ ಕುರಿತು ಗೋಷ್ಠಿಗಳು ನಡೆದವು. ಬಳ್ಳಾರಿ ಜಿಲ್ಲೆಯ ಜಾನಪದ ಕುರಿತು ನಡೆದ ಗೋಷ್ಠಿಯಲ್ಲಿ ಡಾ. ಎನ್.ಸಿದ್ದೇಶ್ವರಿ ವಿಷಯ ಮಂಡಿಸಿದರು. ಪ್ರೊ.ಸಿ.ದೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ. ಸೋಮಶೇಖರ್ ಆಶಯ ನುಡಿಗಳನ್ನಾಡಿದರು. ಕಲ್ಯಾಣ ಕರ್ನಾಟಕ ಚಳವಳಿ ಪರಂಪರೆ ಕುರಿತು ನಡೆದ ಗೋಷ್ಠಿಯಲ್ಲಿ ಸಿರಿಗೇರಿ ಪನ್ನರಾಜ್ ವಿಷಯ ಮಂಡಿಸಿದರು. ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.