ಭಾವನೆಗಳ ಅಭಿವಕ್ತಿಯೇ ಕವಿತೆಯಾಗಿದೆ: ಯೋಗೇಶ್ ಮಾರೇನಹಳ್ಳಿ

| Published : Oct 14 2025, 01:00 AM IST

ಸಾರಾಂಶ

ಕವಿಯಾದವನಿಗೆ ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಒಳಗಣ್ಣಿರಬೇಕು. ಇತರರ ಭಾವನೆ ಮತ್ತು ನೋವುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವ ಗುಣವನ್ನು ಕವಿ ಬೆಳಸಿಕೊಂಡಿರಬೇಕು. ಆಗ ಮಾತ್ರ ಉತ್ತಮ ಕವಿತೆಗಳು ರೂಪುಗೊಂಡು ಸಮಾಜಕ್ಕೆ ಮಾರ್ಗಸೂಚಿಯಾಗಬಲ್ಲವು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾನವನ ಮಾನಸಿಕ ತಲ್ಲಣಗಳು ಹಾಗೂ ವರ್ತಮಾನದ ಘಟನೆಗಳ ಭಾವನೆಯ ಅಭಿವ್ಯಕ್ತಿಯೇ ಕವಿತೆಯಾಗಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ಯೋಗೇಶ್ ಮಾರೇನಹಳ್ಳಿ ಹೇಳಿದರು.

ಪಟ್ಟಣದ ಜಯನಗರ ಬಡಾವಣೆಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ದೀಪಾವಳಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸಂಕಷ್ಟಗಳನ್ನು ಬಗೆಹರಿಸಿ ಕೊಡುವಲ್ಲಿ ಕವಿತೆಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.

ಕವಿಯಾದವನಿಗೆ ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಒಳಗಣ್ಣಿರಬೇಕು. ಇತರರ ಭಾವನೆ ಮತ್ತು ನೋವುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವ ಗುಣವನ್ನು ಕವಿ ಬೆಳಸಿಕೊಂಡಿರಬೇಕು. ಆಗ ಮಾತ್ರ ಉತ್ತಮ ಕವಿತೆಗಳು ರೂಪುಗೊಂಡು ಸಮಾಜಕ್ಕೆ ಮಾರ್ಗಸೂಚಿಯಾಗಬಲ್ಲವು ಎಂದು ಅಭಿಪ್ರಾಯಪಟ್ಟರು.

ಕವಿಗೋಷ್ಟಿ ಉದ್ಘಾಟಿಸಿದ ಶಿಕ್ಷಕ ಅ.ಮ.ಶ್ಯಾಮೇಶ್ ಮಾತನಾಡಿ, ಕವಿತೆಗಳು ಬುದ್ಧಿ ಮತ್ತು ಭಾವನೆಗಳನ್ನು ಉದ್ದದೀಪನಗೊಳಿಸಿ ಅಮೃತತ್ವದೆಡೆಗೆ ನಮ್ಮನ್ನು ಒಯ್ಯುವಂತರಬೇಕೇ ವಿನಹಃ ಮನಸ್ಸು ಮನಸ್ಸುಗಳ ನಡುವೆ ಬಿರುಕು ಹುಟ್ಟಿಸುವಂತಿರಬಾರದು ಎಂದರು.

ಲೇಖಕ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಕವಿತೆಗಳಿಗೆ ವರ್ತಮಾನದ ವಿಚಾರಗಳೇ ವಸ್ತುವಾಗಿ ಸಾಮಾಜಿಕ ಮೌಲ್ಯದ ಸಂದೇಶ ಸಾರುವ ನಿಟ್ಟಿನಲ್ಲಿ ರಚಿತವಾಗಬೇಕು ಎಂದರು.

ಕವಿಗೋಷ್ಠಿಯಲ್ಲಿ ಶಿಕ್ಷಕ ಮಾರೇನಹಳ್ಳಿ ಲೋಕೇಶ್ ಬರೆದಿರುವ ಲೋಕಾನುಭವ ಶತಕ ಆಧುನಿಕ ವಚನ ಸಂಕಲನವನ್ನು ಕವಿಯತ್ರಿ ಭವಾನಿ ಲೋಕೇಶ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷರಾದ ಕೆ.ಎಸ್.ಸೋಮಶೇಖರ್, ಕೆ.ಆರ್.ನೀಲಕಂಠ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪದ್ಮೇಶ್, ಸಾಹಿತಿ ಮಾರೇನಹಳ್ಳಿ ಲೋಕೇಶ್ ಮಾತನಾಡಿದರು. ಕವಿಗಳಾದ ಗಣಂಗೂರು ನಂಜೇಗೌಡ, ಕಲ್ಕುಣಿ ಲೋಕೇಶ್, ಪಾಂಡವಪುರ ಮಂಜುನಾಥ್, ನಾರಾಯಣಸ್ವಾಮಿ, ವಿ.ಜಿ.ಮಲ್ಲಿಕಾರ್ಜುನ ಸ್ವಾಮಿ, ಚಂದ್ರು, ಶಿವಣ್ಣ, ರಂಗನಾಥ, ಕ್ಯಾತನಹಳ್ಳಿ ಬಿಂದು, ಕೃಷ್ಣಯ್ಯ, ಚಾ.ಶಿ.ಜಯಕುಮಾರ್, ಚನ್ನೇಗೌಡ ಸೇರಿದಂತೆ ಹಲವರು ಕವಿತೆ ವಾಚಿಸಿದರು.