ಕಾವ್ಯ ರಚನೆಗೆ ಅನುಭವದ ಹಿನ್ನೆಲೆ ಬೇಕು: ಬಿಸ್ವಾಗರ

| Published : May 14 2024, 01:05 AM IST

ಸಾರಾಂಶ

ರಬಕವಿಯ ಬಸವ ನಗರದ ಚಿತ್ರಕಲಾ ಶಿಕ್ಷಕ ಈರಣ್ಣ ತೇರಣಿ ಅವರ ನಿವಾಸದಲ್ಲಿ ಭಾನುವಾರ ಸಂಜೆ ಕಸಾಪ ಜಿಲ್ಲಾ ಘಟಕ, ತಾಲೂಕು ಘಟಕ ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ ವಲಯ ಘಟಕಗಳ ಸಂಯುಕ್ತಾಶ್ರಯದಲ್ಲಿ ಪುಸ್ತಕಾವಲೋಕನ-೨೯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಶ್ರಮಿಕ ಕುಟುಂಬದ ಹಿನ್ನೆಲೆಯಿಂದ ಬಂದ ದೊಡ್ಡಣ್ಣ ಬಜಂತ್ರಿಯವರು ಕಡುಬಡತನವನ್ನೇ ಹಾಸಿಹೊದ್ದು ಮಲಗಿದವರು. ದಲಿತ, ಬಂಡಾಯ ಸಾಹಿತ್ಯವನ್ನು ಅವಲೋಕಿಸುತ್ತ ಬರೆದವರು. ಅವರ ಕಾವ್ಯ ಕಲಾ ಕೌಶಲ್ಯ ಗಮನಾರ್ಹವಾದುದು. ಕವಿ ಅನುಭವದ ಹಿನ್ನೆಲೆಯಲ್ಲಿ ಕಾವ್ಯ ರಚಿಸುತ್ತಾನೆ ಎಂದು ಮಹಾಲಿಂಗಪುರದ ಹಿರಿಯ ಸಾಹಿತಿ ದೇವೇಂದ್ರ ಬಿಸ್ವಾಗರ ಹೇಳಿದರು.

ರಬಕವಿಯ ಬಸವ ನಗರದ ಚಿತ್ರಕಲಾ ಶಿಕ್ಷಕ ಈರಣ್ಣ ತೇರಣಿ ಅವರ ನಿವಾಸದಲ್ಲಿ ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯಗಳು ತೇರದಾಳ, ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-೨೯ ಕಾರ್ಯಕ್ರಮದಲ್ಲಿ ವಿಜಯಪುರದ ನಿವೃತ್ತ ಪ್ರಾಚಾರ್ಯ ಪ್ರೊ. ದೊಡ್ಡಣ್ಣ ಬಜಂತ್ರಿಯವರ ಒಲೆಯ ಹೊಕ್ಕು ಕೃತಿ ಅವಲೋಕಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಕೃತಿಯಲ್ಲಿ ವೈವಿಧ್ಯಮಯ ೫೨ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ಅವರ ಗಟ್ಟಿ ಬರಹ ಸಾಹಿತ್ಯದ ಹೊಲದಲ್ಲಿ ದಟ್ಟವಾಗಿ ನಾಟಿಯಾಗಿ ಬೇರೂರಿವೆ ಎಂದು ಹೇಳಿದರು.

ಹಿರಿಯ ಜಾನಪದ ಕಲಾವಿದ ಬಸವರಾಜ ತೇರಣಿ ಅಧ್ಯಕ್ಷತೆ ವಹಿಸಿದ್ದರು. ಮಹಾಶಾಂತ ಶೆಟ್ಟಿ, ಮಹಾದೇವ ಕವಿಶೆಟ್ಟಿ, ಅವಲೋಕನದಲ್ಲಿ ಸಂವಾದ ನಡೆಸಿದರು. ಕೃತಿಕಾರ ಪ್ರೊ.ದೊಡ್ಡಣ್ಣ ಭಜಂತ್ರಿ ಸನ್ಮಾನ ಸ್ವೀಕರಿಸಿ ಒಲೆಯ ಹೊಕ್ಕು ಇದು ನೋವುಗಳನ್ನು ಅನುಭವಿಸಿದ ಸಂಕೇತ. ಕವಿ ಭಾವಲೋಕದಲ್ಲಿ ಮಿಂದು ಬರೆಯುತ್ತಾನೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಈರಣ್ಣ ತೇರಣಿ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.

ಹಿರಿಯ ಸಾಹಿತಿ ಶಿವಾನಂದ ದಾಶಾಳ, ಮಲ್ಲೇಶಪ್ಪ ಕುಚನೂರ, ಇಂದುಧರ ಬೆಳಗಲಿ, ಡಿ. ಬಿ. ಜಾಯಗೊಂಡ, ಶರತ್ ಜಂಬಗಿ, ರವೀಂದ ್ರಅಷ್ಟಗಿ, ಪ್ರಕಾಶ ಸಿಂಗನ್, ಸವಿತಾ ಹೊಸೂರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.