ಸಾರಾಂಶ
ಉಡುಪಿ ರಥಬೀದಿ ಗೆಳೆಯರು ಸಂಘಟನೆ ಆಶ್ರಯದಲ್ಲಿ, ಜಿ. ರಾಜಶೇಖರ್ ಫೌಂಡೇಶನ್ ಸಹಯೋಗದಲ್ಲಿ ಎಂ.ಜಿ.ಎಂ. ಕಾಲೇಜನ ರವೀಂದ್ರ ಮಂಟಪದಲ್ಲಿ ನಡೆದ ‘ಕವಿ, ನಾಟಕಕಾರ ರಘುನಂದನ ಅವರೊಂದಿಗೆ ಒಂದು ಸಂಜೆ’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಾವ್ಯ ರಚನೆ ತುಂಬಾ ಸಲೀಸು ಎಂಬ ಭಾವನೆಯಿಂದ ಇಂದು ಹಲವರು ಕಾವ್ಯ ರಚನೆ ಮಾಡ್ತಾ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಟ್ಟಾರೆ ಗೀಚುತ್ತಾ ಕಾವ್ಯ ಸೃಷ್ಟಿಯ ಗಾಂಭೀರ್ಯ ಕಡಿಮೆ ಆಗಿದೆ. ಭಾಷೆಯ ಪಾವಿತ್ರ್ಯದ ಹಂಗು ಇಲ್ಲದೆ ಉತ್ತಮ ಕಾವ್ಯ ಸೃಷ್ಟಿ ಸಾಧ್ಯ ಇಲ್ಲ ಎಂದು ಖ್ಯಾತ ರಂಗ ನಿರ್ದೇಶಕ, ಕವಿ ರಘುನಂದನ ಹೇಳಿದರು.ಅವರು ಉಡುಪಿ ರಥಬೀದಿ ಗೆಳೆಯರು ಸಂಘಟನೆ ಆಶ್ರಯದಲ್ಲಿ, ಜಿ. ರಾಜಶೇಖರ್ ಫೌಂಡೇಶನ್ ಸಹಯೋಗದಲ್ಲಿ ಎಂ.ಜಿ.ಎಂ. ಕಾಲೇಜನ ರವೀಂದ್ರ ಮಂಟಪದಲ್ಲಿ ನಡೆದ ‘ಕವಿ, ನಾಟಕಕಾರ ರಘುನಂದನ ಅವರೊಂದಿಗೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವ್ಯದ ಜೊತೆ ಒಂದು ಅಫೇರ್ ಇಟ್ಟುಕೊಳ್ಳಬೇಕು. ಅದು ಆಳವಾಗಿ ಪ್ರೀತಿಸುವಂತೆ ಮಾಡಿ ಬಿಡುತ್ತದೆ. ನನಗೆ ಕಾವ್ಯ ಎಲ್ಲ ಸಂಕೀರ್ಣತೆಯ ಜೊತೆಯೇ ಒದಗಿ ಬರುವ ಅತ್ಯುತ್ತಮ ಅಭಿವ್ಯಕ್ತಿ. ಅದು ಎಷ್ಟೋ ಬಾರಿ ಸಾಕ್ಷಾತ್ಕಾರ ಅನ್ನಿಸಿದ್ದು ಸುಳ್ಳಲ್ಲ ಎಂದರು. ತಮ್ಮ ‘ನಾನು ಸತ್ತ ಮೇಲೆ’ ಕವನಸಂಗ್ರಹದ ಹಲವು ಕವನಗಳನ್ನು ವಾಚಿಸಿ ವ್ಯಾಖ್ಯಾನಿಸಿದರು.ಹಿರಿಯ ವಿಮರ್ಶಕ ಹಿರಿಯಡ್ಕ ಮುರಳೀಧರ ಉಪಾಧ್ಯ, ಬೇಂದ್ರೆ ಕಾವ್ಯಮಿಮಾಂಸೆ ಕುರಿತು ರಘುನಂದನ ಬರೆದ ‘ತುಯ್ತವೆಲ್ಲ ನವ್ಯದತ್ತ’ ಪುಸ್ತಕ ಕುರಿತು ಮಾತಾಡಿದರು. ಹಿರಿಯ ಚಿಂತಕ ಕೆ. ಫಣಿರಾಜ್ ಸಂವಾದದಲ್ಲಿ ಪಾಲ್ಗೊಂಡರು.
ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಿ.ಪಿ. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.