ಸಮಾಜ ತಿದ್ದುವಲ್ಲಿ ಕವಿಗಳ ಪಾತ್ರ ಅನನ್ಯ

| Published : Apr 19 2025, 12:30 AM IST

ಸಮಾಜ ತಿದ್ದುವಲ್ಲಿ ಕವಿಗಳ ಪಾತ್ರ ಅನನ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತಿ, ತಂದೆ-ತಾಯಿ. ಬಂಧು-ಬಳಗ, ಆಚಾರ-ವಿಚಾರ, ಸಂಸ್ಕೃತಿ, ಪರಂಪರೆ, ನಡೆ-ನುಡಿ, ರಾಷ್ಟ್ರಪ್ರೇಮ, ಪ್ರಸಕ್ತ ರಾಜಕೀಯ ಸನ್ನಿವೇಶ, ಮೋಸ, ವಂಚನೆ, ಢೋಂಗಿತನ, ಉಡುಗೆ-ತೊಡುಗೆ, ಆಹಾರ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿಕೊಂಡು ಕವನಗಳನ್ನು ರಚಿಸುವ ಮೂಲಕ ಮೌಲ್ಯ ಯಾವುದೆಂಬುದನ್ನು ಅರುಹಿದ್ದಾರೆ

ಹುಬ್ಬಳ್ಳಿ: ಸಮಾಜ ತಿದ್ದುವಲ್ಲಿ ಕವಿಗಳ ಪಾತ್ರ ಅನನ್ಯವಾದುದು. ಅಂತಹ ಕವಿ ಕಾರ್ಯಕ್ಕೆ ಜ್ಯೋತಿ ಚಿನಗುಂಡಿ ಮುಂದಡಿ ಇಟ್ಟಿರುವುದು ನನಗೆ ಹೆಮ್ಮೆ ಮೂಡಿಸಿದೆ‌ ಎಂದು ಹಿರಿಯ ಸಾಹಿತಿ ಕೆ. ಶಾಂತಾ ಬಸವರಾಜ ಹೇಳಿದರು.

ನಗರದ ಐ.ಬಿ.ಎಂ.ಆರ್.ಕಾಲೇಜಿನ ಸಭಾಂಗಣದಲ್ಲಿ ಹುಬ್ಬಳ್ಳಿಯ ಜೀವಿ ಪ್ರಕಾಶನದ ಅಡಿಯಲ್ಲಿ ಜ್ಯೋತಿ ಚಿನಗುಂಡಿ ಅವರ ರಚಿತ ''''ಭಾವ ಚಿತ್ತಾರ''''ಎಂಬ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕೃತಿ ಕುರಿತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನದಾಫ ಎಚ್.ಎಚ್. ಮಾತನಾಡಿ. ಸಂಕಲನದ ಐವತ್ತೆರಡೂ ಕವನಗಳು ಅತ್ಯಂತ ಮೌಲ್ಯಯುತ ಸಂದೇಶಗಳನ್ನು ನೀಡುತ್ತಿದ್ದು, ಭಕ್ತಿ, ತಂದೆ-ತಾಯಿ. ಬಂಧು-ಬಳಗ, ಆಚಾರ-ವಿಚಾರ, ಸಂಸ್ಕೃತಿ, ಪರಂಪರೆ, ನಡೆ-ನುಡಿ, ರಾಷ್ಟ್ರಪ್ರೇಮ, ಪ್ರಸಕ್ತ ರಾಜಕೀಯ ಸನ್ನಿವೇಶ, ಮೋಸ, ವಂಚನೆ, ಢೋಂಗಿತನ, ಉಡುಗೆ-ತೊಡುಗೆ, ಆಹಾರ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿಕೊಂಡು ಕವನಗಳನ್ನು ರಚಿಸುವ ಮೂಲಕ ಮೌಲ್ಯ ಯಾವುದೆಂಬುದನ್ನು ಅರುಹಿದ್ದಾರೆ. ಇಲ್ಲಿಯ ಕವನಗಳಲ್ಲಿಯ ಆಂತರಿಕ ಹೂರಣ ಸವಿಯುತ್ತ ಹೋದಂತೆ ನಮ್ಮ ಸಂಸ್ಕೃತಿಯ ರುಚಿ ಮನದಟ್ಟಾಗುತ್ತದೆ ಎಂದರು.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಮನದಲ್ಲಿ ಮೂಡಿದ ಎಲ್ಲ ನೋವು-ನಲಿವುಗಳಿಗೆ ಅಕ್ಷರ ರೂಪ ಕೊಟ್ಟು ಸುಂದರ ಕವನ ಸಂಕಲನ ಹೊರ ತಂದಿದ್ದಾರೆ. ಅವರಿಗೆ ಮತ್ತು ಪ್ರಕಾಶಕರಾದ ಜೀವಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಮಾತನಾಡಿದರು.

ಅತಿಥಿಗಳಾಗಿ ಡಾ. ರಾಮೂ ಮೂಲಗಿ, ಶ್ರೀ ಆಚಾರ್ಯ, ಮಂಜುನಾಥ ದಾಟನಾಳ, ಕವಿಯತ್ರಿಯರ ಹೆಣ್ಣಜ್ಜಿಯಾದ ಶಾವಂತ್ರಮ್ಮ ಚಟ್ನಿ, ಉಷಾರಾಣಿ ಸಿ. ಕೆರೂರ ಶುಭ ಹಾರೈಸಿದರು.

ಕವಿಯತ್ರಿ ಜ್ಯೋತಿ ಚಿನಗುಂಡಿ, ಪುಸ್ತಕ ಪ್ರಕಾಶಕರಾದ ಗದಿಗಯ್ಯ ಹಿರೇಮಠ ಮಾತನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ಮಹೇಶ ಹೊರಕೇರಿ ನಿರೂಪಿಸಿದರು. ವಾಣಿಶ್ರೀ ವಂದಿಸಿದರು.