ಸಾರಾಂಶ
ಕುಷ್ಟಗಿ:
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ನಾಯಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಮುನ್ನಡೆಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯದ ಹೆಸರಿನಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತುವುದು, ಕೋಮುವಾದ, ಶ್ವೇಚ್ಛಾಚಾರ ಕೆಲಸ ನಡೆಯುತ್ತಿವೆ. ಇದನ್ನು ನಾವೆಲ್ಲರೂ ಒಗ್ಗಟ್ಟಾಗುವ ಮೂಲಕ ಎಲ್ಲವನ್ನು ಎದುರಿಸಿ ಸುಂದರ ಜೀವನ ನಡೆಸಬೇಕಿದೆ ಎಂದರು.
ದೇಶದಲ್ಲಿ ಇನ್ನೂ ಬಡತನವಿದ್ದು ತೊಲಗಿಸಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದ ಅವರು, ಇತ್ತೀಚಿಗೆ ನಡೆದ ಆಪರೇಷನ್ ಸಿಂಧೂರ ಯುದ್ಧದಲ್ಲಿ ಸೈನಿಕರ ಪಾತ್ರ ಮಹತ್ತರವಾದದು ಎಂದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ಸ್ವಾತಂತ್ರ್ಯ ತಂದುಕೊಟ್ಟಿರುವ ಮಹಾನ್ ನಾಯಕರ ಹೋರಾಟಗಳ ಕುರಿತು ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ತಹಸೀಲ್ದಾರ್ ಕಚೇರಿ, ಶಾಸಕರ ಕಾರ್ಯಾಲಯ, ಸಂತೆ ಮಾರುಕಟ್ಟೆ, ನ್ಯಾಯಾಲಯದ ಆವರಣ, ಶಾಲಾ-ಕಾಲೇಜುಗಳು, ಅಂಚೆ ಕಚೇರಿ, ಪುರಸಭೆ, ಸೇರಿದಂತೆ ವಿವಿಧ ಕಚೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರದವು.ಈ ವೇಳೆ ತಾಪಂ ಇಒ ಪಂಪಾಪತಿ ಹಿರೇಮಠ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಸಿಪಿಐ ಯಶವಂತ ಬಿಸನಳ್ಳಿ, ಪ್ರಭಾರಿ ಬಿಇಒ ಜಗದೀಶಪ್ಪ ಮೆಣೆದಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವಿವಿಧೆಡೆ ಆಚರಣೆ:ದೋಟಿಹಾಳ ಗ್ರಾಪಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮಹೇಶ ಕಾಳಗಿ, ಕೇಸೂರು ಗ್ರಾಪಂನಲ್ಲಿ ಅಧ್ಯಕ್ಷೆ ಶ್ರೀದೇವಿ ಮಳಿಮಠ, ದೋಟಿಹಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಸೇರಿದಂತೆ ಕ್ಯಾದಿಗುಪ್ಪ, ಬಿಜಕಲ್, ಶೀರಗುಂಪಿ, ಮುದೇನೂರು, ಜುಮಲಾಪೂರು ಸೇರಿದಂತೆ ಅನೇಕ ಗ್ರಾಪಂಗಳಲ್ಲಿ ಧ್ವಜಾರೋಹಣ ನೆರವೇರಿತು.