ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಜಾಗೃತಿಗಾಗಿ ಪಾಲಿಬೆಟ್ಟದಲ್ಲಿ ಶುಕ್ರವಾರ ‘ಸ್ವಚ್ಛ ನಡಿಗೆ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಿದ್ದಾಪುರ : ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಜಾಗೃತಿಗಾಗಿ ಪಾಲಿಬೆಟ್ಟದಲ್ಲಿ ಶುಕ್ರವಾರ ‘ಸ್ವಚ್ಛ ನಡಿಗೆ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕೊಡಗು ಜಿಲ್ಲಾ ಪರಿಸರ ಸಂರಕ್ಷಣಾ ಹೋರಾಟ ಸಮಿತಿ, ಸಂತ ಅನ್ನಮ್ಮ ಪದವಿ ಕಾಲೇಜು ಮತ್ತು ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನ ಆಯೋಜಿಸಲಾಗಿತ್ತು.

ವಿರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿ, ಕೊಡಗಿನ ಸ್ವಚ್ಛತೆ ಮತ್ತು ನೈರ್ಮಲ್ಯದ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪಾಲಿಬೆಟ್ಟದಲ್ಲಿ ಆರಂಭಿಸಿರುವ ಅಭಿಯಾನವನ್ನು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.

ಎರಡು ಕಾಲೇಜುಗಳ ಸುಮಾರು 100 ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ರಸ್ತೆ ಬದಿಗಳಲ್ಲಿದ್ದ ಕಸವನ್ನು ಸಂಗ್ರಹಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಪ್ರತಿನಿಧಿಗಳು, ಕಾಲೇಜುಗಳ ಉಪನ್ಯಾಸಕರು, ಎನ್‌ಎಸ್‌ಎಸ್ ಸಂಯೋಜಕರು, ಪೊಲೀಸ್ ಸಿಬ್ಬಂದಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.