ಮಾಂಜಾದಾರಕ್ಕೆ ಸಿಲುಕಿ ಮಹಿಳೆ ಬಲಿಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪೊಲೀಸ್ ಕಮಿಷನರೇಟ್ ಸಮರ ಸಾರಿದೆ. ಗಿಡ ಮರಗಳಲ್ಲಿನ ಮಾಂಜಾದಾರ ತೆರವು ಮಾಡುತ್ತಿರುವ ಜತೆಗೆ ಹಾರಿಸುವವರ ಹಾಗೂ ಮಾರಾಟಗಾರರ ವಿರುದ್ಧ ಬರೋಬ್ಬರಿ 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಹುಬ್ಬಳ್ಳಿ:
ಮಾಂಜಾದಾರಕ್ಕೆ ಸಿಲುಕಿ ಮಹಿಳೆ ಬಲಿಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪೊಲೀಸ್ ಕಮಿಷನರೇಟ್ ಸಮರ ಸಾರಿದೆ. ಗಿಡ ಮರಗಳಲ್ಲಿನ ಮಾಂಜಾದಾರ ತೆರವು ಮಾಡುತ್ತಿರುವ ಜತೆಗೆ ಹಾರಿಸುವವರ ಹಾಗೂ ಮಾರಾಟಗಾರರ ವಿರುದ್ಧ ಬರೋಬ್ಬರಿ 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮಾಂಜಾದಾರ ಬಳಸುತ್ತಿದ್ದ ಮಕ್ಕಳ ಪೋಷಕರ ಮೇಲೂ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದೆ.ಗಾಳಿಪಟ ಹಾರಿಸಲು ಬಳಸುವ ಮಾಂಜಾದಾರಕ್ಕೆ ಸಿಲುಕಿನ ಎಆರ್ಟಿ ನಗರದ ನಿವಾಸಿ ವಿದ್ಯಾ ಗೌಡರ (38) ಗುರುವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರೇಟ್ ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿತು.
12 ಪ್ರಕರಣ ದಾಖಲು:ಮಾಂಜಾದಾರ ಮಾರಾಟಗಾರರಾದ ಬೆಂಗೇರಿ ನಿವಾಸಿ ಓಬಳೇಶ ಸಾಲಿ, ಉಣಕಲ್ನ ನಾಗರಾಜ್ ಭಟ್, ಕಮರಿಪೇಟ್ ಮೊಹಮ್ಮದ್ ಜಂಗ್ಲಿವಾಲೆ, ಘಂಟಿಕೇರಿ ಹತ್ತಿಕಾಳ ಸಾಲನ ತೌಸೀಫ್ ಜಂಗ್ಲಿವಾಲೆ, ಧಾರವಾಡ ಜನ್ನತ್ ನಗರದ ಶಾಲು ಸೈಯದ್, ಹಳೇ ಹುಬ್ಬಳ್ಳಿ ತನ್ವೀರ್ ಕರ್ಜಗಿ, ಆನಂದನಗರದ ಮೆಹಬೂಬ್ ಬಂಗಡಿವಾಲೆ, ಗೋಕುಲ ರಸ್ತೆ ರಾಮಲಿಂಗೇಶ್ವರ ನಗರ ಅಲ್ಲಭಕ್ಷಾ ಬಾಗಲಕೋಟೆ, ಭೂಸಪ್ಪ ಚೌಕನ ಮೆಹಬೂಬ ಅಲಿಕಾರಿಗಾರ, ಚಿಕ್ಕಮಕ್ಕಳಿಗೆ ಮಾಂಜಾದಾರ ನೀಡಿದ ಪೋಷಕರಾದ ಗಣೇಶ ಪೇಟ್ ನಿವಾಸಿ ಅಷ್ಪಾಕ್ ಖಾಚಿ ಹಾಗೂ ಮಾಂಜಾದಾರ ಬಳಸಿ ಗಾಳಿಪಟ ಹಾರಿಸುತ್ತಿದ್ದ ಗೌಸಿಯಾ ನಗರದ ಅಮೀನ್ ವಜಾದ್, ಅಹ್ಮದ ರಜಾಕ್ ಸವಣೂರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳಿಂದ ₹ 8460 ಮೌಲ್ಯ 50ಕ್ಕೂ ಮಾಂಜಾದಾರದ ರೀಲ್ಗಳನ್ನು ವಶಕ್ಕೆ ಪಡೆಯಲಾಗಿದೆ.ಗಿಡ-ಮರಗಳಿಂದ ಪಟ ತೆರವು:
ನಗರದ ವಿವಿಧ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಗಿಡ-ಮರ, ವಿದ್ಯುತ್ ತಂತಿ, ವಿದ್ಯುತ್ ಕಂಬಗಳಿಗೆ ಸಿಲುಕಿರುವ ಮಾಂಜಾದಾರ ಹಾಗೂ ಗಾಳಿ ಪಟಗಳನ್ನು ಪೊಲೀಸರು ಶುಕ್ರವಾರ ತೆರವು ಮಾಡಿದರು. ಯಾವುದೇ ಕಾರಣಕ್ಕೂ ಇನ್ಮುಂದೆ ಮಾಂಜಾದಾರ ಬಳಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಜತೆಗೆ ಮಹಾನಗರ ಪಾಲಿಕೆಗೆ ಪತ್ರ ಬರೆದಿರುವ ಪೊಲೀಸ್ ಕಮಿಷನರೇಟ್, ಗಿಡ-ಮರ, ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ಸಿಲುಕಿದ್ದ ಮಾಂಜಾದಾರ ಹಾಗೂ ಗಾಳಿಪಟಗಳ ತೆರವು ಕಾರ್ಯಾಚರಣೆ ಮಾಡುವಂತೆ ಕೋರಿದೆ. ಈಗಾಗಲೇ ನಮ್ಮ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿದ್ದು, ಪಾಲಿಕೆ ಹಾಗೂ ಹೆಸ್ಕಾಂ ಸಿಬ್ಬಂದಿ ಸಹಕಾರ ಕೇಳುತ್ತಿದ್ದೇವೆ ಎಂದು ಪೊಲೀಸ್ ಕಮಿಷನರೇಟ್ ಪತ್ರದಲ್ಲಿ ತಿಳಿಸಿದೆ. ಒಂದು ವಾರ ಈ ಕಾರ್ಯ ನಿರಂತರವಾಗಿ ನಡೆಯಲಿದೆ. ಮಾಂಜಾದಾರ ಕಂಡು ಬಂದಲ್ಲಿ ಹಾಗೂ ಅದರಿಂದ ಗಾಳಿಪಟ ಹಾರಿಸುವುದು ಕಂಡು ಬಂದರೆ ತಕ್ಷಣ 112ಗೆ ಸಾರ್ವಜನಿಕರು ತಿಳಿಸಬೇಕು ಎಂದು ಹು-ಧಾ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದರು.ಪಟ ಹಾರಿಸಲ್ಲ ಎಂದು ಪ್ರತಿಜ್ಞೆ!ಈ ನಡುವೆ ಹುಬ್ಬಳ್ಳಿಯಲ್ಲಿ ಮಾಂಜಾದಾರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಶರಾವತಿ ನಗರದ ನಿವಾಸಿಗಳು, ಮಕ್ಕಳು, ಇನ್ಮುಂದೆ ಗಾಳಿ ಪಟ ಹಾರಿಸಲ್ಲ. ಮಾಂಜಾದಾರ ಬಳಸಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಪಟಗಳನ್ನು ಒಂದೆಡೆ ಸೇರಿಸಿ ಅವುಗಳಿಗೆ ಬೆಂಕಿ ಹಚ್ಚಿ ಸುಟ್ಟರು. ಅಲ್ಲದೇ, ಇನ್ಮುಂದೆ ಜನರ ಪ್ರಾಣಕ್ಕೆ ಹಾಗೂ ಪ್ರಾಣಿಗಳ ಜೀವಕ್ಕೆ ಕುತ್ತು ತರುವ ಮಾಂಜಾದಾರ ಬಳಸಲ್ಲ. ಗಾಳಿ ಪಟ ಹಾರಿಸಲ್ಲ ಎಂದು ಸಾಮೂಹಿಕವಾಗಿ ಪ್ರತಿಜ್ಞೆ ಮಾಡಿದರು.
ಮನುಷ್ಯರ ಜೀವಕ್ಕೆ ಕುತ್ತು ತರುತ್ತಿರುವ ಮಾಂಜಾದಾರವನ್ನು ಯಾರು ಬಳಸುವಂತಿಲ್ಲ. ಬಳಸಿದ್ದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಎಲ್ಲಿಯಾದರೂ ಮಾಂಜಾದಾರ ಬಳಸುತ್ತಿರುವುದು ಕಂಡು ಬಂದರೆ ತಕ್ಷಣವೇ 112 ಕರೆ ಮಾಡಿ ಮಾಹಿತಿ ನೀಡಿ.ಭೂಷಣ ಬೋರಸೆ, ಪೊಲೀಸ್ ಕಮಿಷನರ್