ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ಉಲ್ಲಾಸ್ ನಗರದ ಜಗನ್ನಾಥ ಶೆಟ್ಟಿ ಎಂಬುವರ ಕಾಫಿ ಕಣದಲ್ಲಿ ಕಳೆದ ಭಾನುವಾರ ಲಕ್ಷಾಂತರ ರುಪಾಯಿ ಮೌಲ್ಯದ ಕಾಫಿಯನ್ನು ನಾಲ್ಕೈದು ಜನರಿದ್ದ ಖದೀಮರ ಗುಂಪು ದೋಚಿ ಪರಾರಿಯಾಗಿದ್ದರು, ಈ ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕಾಫಿ ಬೆಳೆಗಾರರ ಸಂಘವು ಪೊಲೀಸರಲ್ಲಿ ಮನವಿ ಮಾಡಿದ್ದರು. 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ಉಲ್ಲಾಸ್ ನಗರದ ಜಗನ್ನಾಥ ಶೆಟ್ಟಿ ಎಂಬುವರ ಕಾಫಿ ಕಣದಲ್ಲಿ ಕಳೆದ ಭಾನುವಾರ ಲಕ್ಷಾಂತರ ರುಪಾಯಿ ಮೌಲ್ಯದ ಕಾಫಿಯನ್ನು ನಾಲ್ಕೈದು ಜನರಿದ್ದ ಖದೀಮರ ಗುಂಪು ದೋಚಿ ಪರಾರಿಯಾಗಿದ್ದರು, ಈ ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕಾಫಿ ಬೆಳೆಗಾರರ ಸಂಘವು ಪೊಲೀಸರಲ್ಲಿ ಮನವಿ ಮಾಡಿದ್ದರು.

ಇದಾದ ಬೆನ್ನಲ್ಲೇ ಕಳೆದ ಬುಧವಾರ ಮುಂಜಾನೆ ಸುಮಾರು 4.30ರ ವೇಳೆಯಲ್ಲಿ ಅದೇ ಕದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಅಡ್ಡ ಬಂದ ಮಾಲೀಕರ ಮೇಲೆ ಬ್ಯಾಟ್ ಹಾಗೂ ಕಬ್ಬಿಣದ ರಾಡ್ ಬಳಸಿ ತೀವ್ರ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಬಂದೂಕು ಹಾಗೂ ಕಾಫಿಯನ್ನು ದೋಚಿ ಪರಾರಿಯಾಗಿದ್ದರು. ಕಾಫಿ ಬೆಳೆಗಾರರ ಸಂಘ ಸೇರಿದಂತೆ ಗ್ರಾಮದ ಹಲವಾರು ಮುಖಂಡರು ಕೃತ್ಯವನ್ನು ಖಂಡಿಸಿ ಕಳ್ಳರನ್ನು ಕೂಡಲೇ ಬಂಧಿಸಬೇಕು ಎಂದು ಪೊಲೀಸರ ಮೇಲೆ ಒತ್ತಡ ಹೇರಿದ್ದರು.

ಘಟನೆ ಸಂಬಂಧ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿ ಖದೀಮರ ಸುಳಿವು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದಾದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ವಶಕ್ಕೆ ಪಡೆದ ಆರೋಪಿಗಳನ್ನು ಸುಮಾರು ಇಪ್ಪತ್ತು ವರ್ಷಗಳ ಆಸುಪಾಸಿನ ಸ್ಥಳೀಯ ನಿವಾಸಿಗಳಾದ ಸೈಯದ್ ಮುಬಾರಕ್, ಶಹೀಬ್ ಅಹ್ಮದ್, ಅಬ್ದುಲ್ ಅಜೀಜ್, ಸಾಗರ್, ಪ್ರಜ್ವಲ್ ಎಂದು ಗುರುತಿಸಲಾಗಿದ್ದು ಕಾಫಿಯನ್ನು ಖರೀದಿ ಮಾಡಿದ ಆರೋಪಿ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಸದ್ಯ ಇವರನ್ನು ಜೈಲುಗಟ್ಟುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ಕಾಫಿ ಬೆಳೆಗಾರರ ಸಂಘ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.