ಮಾದಕ ವ್ಯಸನಿಗಳಿಗೆ ಪೊಲೀಸ್‌ ಕಮಿಷನರ್‌ ಕ್ಲಾಸ್‌

| Published : Dec 30 2024, 01:01 AM IST

ಮಾದಕ ವ್ಯಸನಿಗಳಿಗೆ ಪೊಲೀಸ್‌ ಕಮಿಷನರ್‌ ಕ್ಲಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಒಟ್ಟು 806 ಮಾದಕ ವ್ಯಸನಿಗಳನ್ನು ಗುರುತಿಸಲಾಗಿತ್ತು. ಇವರಲ್ಲಿ 634 ವ್ಯಸನಿಗಳ ಪರೇಡ್‌ ನಡೆಸಿ ಮತ್ತೊಮ್ಮೆ ಇಂತಹ ದುಶ್ಚಟದ ದಾಸರಾಗದಂತೆ ಎಚ್ಚರಿಕೆ ನೀಡಲಾಯಿತು.

ಹುಬ್ಬಳ್ಳಿ:

ಹೊಸ ವರ್ಷಾಚರಣೆ ಹಿನ್ನೆಲೆ ಭಾನುವಾರ ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಸಿಎಆರ್‌ ಮೈದಾನದಲ್ಲಿ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಮಾದಕ ವ್ಯಸನಿಗಳ ಪರೇಡ್‌ ನಡೆಸಿದರು. ಈ ವೇಳೆ ಕ್ಲಾಸ್‌ ತೆಗೆದುಕೊಂಡ ಅವರು, ಇನ್ನೊಮ್ಮೆ ಇಂತಹ ಪ್ರಕರಣದಲ್ಲಿ ಭಾಗಿಯಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಒಟ್ಟು 806 ಮಾದಕ ವ್ಯಸನಿಗಳನ್ನು ಗುರುತಿಸಲಾಗಿತ್ತು. ಇವರಲ್ಲಿ 634 ವ್ಯಸನಿಗಳ ಪರೇಡ್‌ ನಡೆಸಿ ಮತ್ತೊಮ್ಮೆ ಇಂತಹ ದುಶ್ಚಟದ ದಾಸರಾಗದಂತೆ ಎಚ್ಚರಿಕೆ ನೀಡಲಾಯಿತು.

10ಕ್ಕೂ ಅಧಿಕ ಮಾಲಾಧಾರಿಗಳು:

ಪರೇಡ್‌ನಲ್ಲಿ 10ಕ್ಕೂ ಅಧಿಕ ಅಯ್ಯಪ್ಪ ಮಾಲಾಧಾರಿಗಳು ಮಾದಕ ವ್ಯಸನಿಗಳಾಗಿರುವುದು ಕಂಡುಬಂದಿತು. ಇದರಿಂದ ಕುಪಿತಗೊಂಡ ಕಮಿಷನರ್‌, ದೇವರ ಹೆಸರಿನಲ್ಲಿ ಮಾಲೆ ಹಾಕಿ ಇಂತಹ ದುಶ್ಚಟಕ್ಕೆ ಬಲಿಯಾಗುತ್ತಿದ್ದೀರ ಎಂದು ತರಾಟೆಗೆ ತಗೆದುಕೊಂಡರು. ಇದೇ ವೇಳೆ ಪರೇಡ್‌ನಲ್ಲಿದ್ದ 15ಕ್ಕೂ ಅಧಿಕ ಆಟೋ ಚಾಲಕರಿಗೂ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ಮಾದಕ ವ್ಯಸನಿಗಳ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿ ಸಂಬಂಧಿಸಿದವರಿಗೆ ವಿವರಿಸಿ. ಅವರ ಪಾಲಕರನ್ನು ಕರೆಸಿ ತಿಳಿಹೇಳಿ. ಆದಾಗ್ಯೂ ಅವರು ಬಗ್ಗದಿದ್ದರೆ ನೀವೇ ಅವರಿಗೆ ಬುದ್ಧಿ ಕಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ ಸೇರಿದಂತೆ ಎಸಿಪಿಗಳು, ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿದ್ದರು.ಜನವರಿಯಿಂದ ಗಡಿಪಾರು ಪ್ರಕ್ರಿಯೆ ಆರಂಭ:

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳು ಹಾಗೂ ಪೆಡ್ಲರ್‌ಗಳ ಪರೇಡ್ ಮಾಡಲಾಗಿದೆ. ಈ ವರ್ಷಾಂತ್ಯದಲ್ಲಿ ಗಡಿಪಾರು ಪ್ರಕ್ರಿಯೆ ಶುರು ಮಾಡಬೇಕಿತ್ತು. ಆದರೆ, ಅಧಿವೇಶನ ಸೇರಿದಂತೆ ವಿವಿಧ ಕಾರ್ಯಗಳಿಗೆ ಪೊಲೀಸರು ಬಂದೋಬಸ್ತ್‌ಗೆ ತೆರಳಿದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಜನವರಿಯಿಂದ ಗಡಿಪಾರು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕಮಿಷನರ್‌ ಎನ್. ಶಶಿಕುಮಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗಡಿಪಾರು ಮಾಡುವವರ ಪಟ್ಟಿ ಸಿದ್ಧಪಡಿಸಲಾಗಿದೆ. ರೌಡಿಶೀಟರ್ ತೆರೆಯುವುದು, ಬಿಡುವುದು ನಿರಂತರ ಪ್ರಕ್ರಿಯೆಯಾಗಿದೆ ಎಂದರು. ಕೇಶ್ವಾಪುರ, ವಿದ್ಯಾನಗರ, ಹಳೇ ಹುಬ್ಬಳಿ ಠಾಣೆ ವ್ಯಾಪ್ತಿ ಸೇರಿದಂತೆ ಹಲವು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮತ್ತು ದಾಂಧಲೆ ಮಾಡುತ್ತಿರುವ ಪ್ರಕರಣಗಳು ಸಹ ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸೇರಿ ಚರ್ಚಿಸುತ್ತೇವೆ. ಅವರ ಒಪ್ಪಿಗೆ ಸಿಕ್ಕ ನಂತರ ಜಂಟಿ ಕಾರ್ಯಾಚರಣೆ ಮಾಡಿ ತಹಬದಿಗೆ ತರಲಾಗುವುದು ಎಂದರು.