ಸಾರಾಂಶ
ದಾವಣಗೆರೆ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ವಾರೆಂಟ್ ಜಾರಿ ಮಾಡಿಸಲು ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ಬಡಾವಣೆ ಪೊಲೀಸ್ ಠಾಣೆಯ ಪೇದೆ ಹನುಮಂತಪ್ಪ ಲೋಕಾಯುಕ್ತ ಪೊಲೀಸರ ಗಾಳಕ್ಕೆ ಬಿದ್ದವರು. ದಾವಣಗೆರೆ ಸರಸ್ವತಿ ನಗರದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ಎಂಬುವರು ಸೈಯದ್ ತಹಿರುದ್ದೀನ್ ಎಂಬವರ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ನ್ಯಾಯಾಯಲದಿಂದ ವಾರೆಂಟ್ ಮಾಡಿಸಿ, ಅದನ್ನು ಜಾರಿಗೊಳಿಸಲು ಪೇದೆ ಹನುಮಂತಪ್ಪ ₹2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಕ್ಕಪ್ಪ ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಪೇದೆ ಹನುಮಂತಪ್ಪ ಮೇ 31ರಂದು ₹2 ಸಾವಿರ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡು ಸ್ವೀಕರಿಸಿದ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ಮಾಡಿದ್ದಾರೆ. ಆರೋಪಿ ಹನುಮಂತಪ್ಪನನ್ನು ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ನಿರೀಕ್ಷಕರಾದ ಮಧುಸೂದನ್, ಎಚ್.ಎಸ್. ರಾಷ್ಟ್ರಪತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.