ಗಾಳಿಪಟದ ಅಪಾಯಕಾರಿ ಮಾಂಜಾ ದಾರದಿಂದ ಸಂಭವಿಸುವ ಅನಾಹುತಗಳಿಗೆ ಕಡಿವಾಣ ಹಾಕಲು ಪೊಲೀಸರು ಮಾಂಜಾ ದಾರದ ವಿರುದ್ಧ ನಡೆಸುತ್ತಿರುವ ಸಮರ ಶನಿವಾರವೂ ಮುಂದುವರಿಯಿತು.

ಹುಬ್ಬಳ್ಳಿ:

ಗಾಳಿಪಟದ ಅಪಾಯಕಾರಿ ಮಾಂಜಾ ದಾರದಿಂದ ಸಂಭವಿಸುವ ಅನಾಹುತಗಳಿಗೆ ಕಡಿವಾಣ ಹಾಕಲು ಪೊಲೀಸರು ಮಾಂಜಾ ದಾರದ ವಿರುದ್ಧ ನಡೆಸುತ್ತಿರುವ ಸಮರ ಶನಿವಾರವೂ ಮುಂದುವರಿಯಿತು. ಶುಕ್ರವಾರ 11 ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್‌ ಕಮಿಷನರೇಟ್‌, ಶನಿವಾರ ಮತ್ತೆ 5 ಪ್ರಕರಣ ದಾಖಲಿಸಿದೆ.

ಎರಡು ದಿನಗಳಲ್ಲಿ ಕಮಿಷನರೇಟ್‌ ವ್ಯಾಪ್ತಿಯಲ್ಲಿ 124 ಸ್ಥಳ ಪರಿಶೀಲಿಸಿ, 67 ಮಾಂಜಾ ದಾರ ಮಾರಾಟದ ಅಂಗಡಿಗಳನ್ನು ತಪಾಸಣೆ ನಡೆಸಿದ್ದಾರೆ. ಅಲ್ಲದೆ, 63 ಕಡೆಗಳಲ್ಲಿ ಅಪಾಯಕಾರಿ ದಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಐದು ಕಡೆ ದಾಳಿ, 125 ರೀಲ್‌ ಜಪ್ತಿ:

ಬೆಂಡಿಗೇರಿ, ಹಳೇಹುಬ್ಬಳ್ಳಿ, ನವನಗರ ಹಾಗೂ ಕಸಬಾಪೇಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶನಿವಾರ ದಾಳಿ ನಡೆಸಿ, ಐದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು 125 ರೀಲ್‌ ಮಾಂಜಾ ದಾರ ಹಾಗೂ 8 ಗಾಳಿಪಟ ವಶಪಡಿಸಿಕೊಂಡಿದ್ದಾರೆ. ಬೆಂಡಿಗೇರಿ ಠಾಣೆ ವ್ಯಾಪ್ತಿಯ ಕೆ.ಕೆ. ನಗರದಲ್ಲಿ ಕಿರಾಣಿ ಅಂಗಡಿಯಲ್ಲಿ ಮಾಂಜಾ ದಾರ ಮಾರಾಟ ಮಾಡುತ್ತಿದ್ದ ನಾರಾಯಣ ಪೀಸೆ ವಿರುದ್ಧ ಪ್ರಕರಣ ದಾಖಲಿಸಿ, ಮೂರು ರೀಲ್‌ ದಾರ ಹಾಗೂ ಎರಡು ಗಾಳಿಪಟ ಜಪ್ತಿ ಮಾಡಲಾಗಿದೆ.

ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಹೆಗ್ಗೇರಿ ಅಂಬೇಡ್ಕರ್ ಮೈದಾನದ ಬಳಿ ಮಾರಾಟ ಮಾಡುತ್ತಿದ್ದ ಸಂಜೀವ ಟಿಕಾರೆ ಬಳಿ 19 ರೀಲ್‌ ದಾರ ಹಾಗೂ 6 ಗಾಳಿಪಟಗಳು ಪತ್ತೆಯಾಗಿವೆ. ಇದೇ ಠಾಣೆ ವ್ಯಾಪ್ತಿಯ ಇಂಡಿ ಪಂಪ್ ವೃತ್ತದ ಬಳಿ ಮಾರಾಟ ಮಾಡುತ್ತಿದ್ದ ತನ್ವೀರ್ ಕರ್ಜಗಿ ಬಳಿ 70 ರೀಲ್‌ ದಾರ ವಶಪಡಿಸಿಕೊಳ್ಳಲಾಗಿದೆ.

ನವನಗರದ ಎಪಿಎಂಸಿ ಮಾರುಕಟ್ಟೆ ಸಮೀಪದ ಕಿರಾಣಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಗಣಪತಸಾ ಪವಾರನಿಂದ 3 ರೀಲ್‌ ಹಾಗೂ ಕಸಬಾಪೇಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಸೈಯದ್ ಫತೇಶಾ ಕಣಕ್ಯಾನಿಂದ 30 ರೀಲ್‌ ದಾರ ಜಪ್ತಿ ಮಾಡಲಾಗಿದೆ. ಬಾಕ್ಸ್‌...

ಮಕ್ಕಳಿಗೆ ದಾರ ಒದಗಿಸಿದ ಪೋಷಕರ ವಿರುದ್ಧವೂ ಕ್ರಮ

ಮಾಂಜಾ ದಾರ ಮಾರಾಟಗಾರರ ಜತೆಗೆ, ತಮ್ಮ ಮಕ್ಕಳಿಗೆ ಇಂತಹ ದಾರ ಒದಗಿಸಿದ ಪೋಷಕರ ವಿರುದ್ಧವೂ ಪೊಲೀಸರು ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಗಾಳಿಪಟದ ಮಾಂಜಾ ದಾರದಿಂದ ಬೈಕ್‌ ಸವಾರರು, ಪಾದಚಾರಿಗಳು ಹಾಗೂ ಪಕ್ಷಿಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಾರಾಟ ಮತ್ತು ಬಳಕೆಯ ಮೇಲೆ ನಿಗಾ ಇರಿಸಲಾಗಿದ್ದು, ವಿಶೇಷ ಕಾರ್ಯಾಚರಣೆ ಮುಂದುವರಿದಿದೆ ಎಂದು ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ.ಪಾಲಿಕೆಯಿಂದಲೂ ಜಾಗೃತಿ

ಮಾಂಜಾ ದಾರದಿಂದ ನಗರದಲ್ಲಿ ಅವಘಡವಾದ ಮೇಲೆ ಹು-ಧಾ ಮಹಾನಗರ ಪಾಲಿಕೆಯೂ ಎಚ್ಚೆತ್ತುಕೊಂಡಿದೆ. ಪಾಲಿಕೆ ವಾಪ್ತಿಯ 82 ವಾರ್ಡ್‌ಗಳಲ್ಲಿ ಮನೆ-ಮನೆಗೆ ಸಂಚರಿಸುವ ಕಸ ಸಂಗ್ರಹ ವಾಹನಗಳಲ್ಲಿನ ಧ್ವನಿವರ್ಧಕದ ಮೂಲಕ (ಜಿಂಗಲ್‌) ಮಾಂಜಾ ದಾರದಿಂದಾಗುವ ಅವಘಡ, ಬಳಕೆ ಮಾಡಿದಲ್ಲಿ ಅವರ ಮೇಲೆ ಆಗುವ ಪೊಲೀಸ್‌ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

ಪೊಲೀಸರಿಂದಲೂ ಜಾಗೃತಿ:

ಪೊಲೀಸ್ ಆಯುಕ್ತಾಲಯ ಹಾಗೂ ಧಾರವಾಡ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾಂಜಾ ದಾರದಿಂದ ಆಗುವ ಅವಘಡಗಳ ಕುರಿತು ವಿಡಿಯೋ ಹಾಗೂ ಪೋಸ್ಟರ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಹುಬ್ಬಳ್ಳಿಯ ಇಂದ್ರ ನಗರದ ಶ್ರೀದೇವಿ ನಲ್ಲನಮ್ಮ ಕಲ್ಯಾಣ ಸೇವಾ ಸಂಘ ಪಂಚ ಕಮಿಟಿ ಹಾಗೂ ಇಂದ್ರಾನಗರ ಜೈಭೀಮ್‌ ಯುವಸೇನೆಯಿಂದ ಗಾಳಿಪಟಗಳಿಗೆ ಮಾಂಜಾದಾರ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡರು.