ರೇವ್‌ ಪಾರ್ಟಿ: ಗಸ್ತಿನಲ್ಲಿದ್ದ ಎಎಸ್‌ಐ ಮುಖ್ಯ ಪೇದೆ, ಪೇದೆ ಅಮಾನತು

| Published : May 25 2024, 01:36 AM IST / Updated: May 25 2024, 12:45 PM IST

ರೇವ್‌ ಪಾರ್ಟಿ: ಗಸ್ತಿನಲ್ಲಿದ್ದ ಎಎಸ್‌ಐ ಮುಖ್ಯ ಪೇದೆ, ಪೇದೆ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಫಾರಂಹೌಸಲ್ಲಿ ಹೆಚ್ಚು ಜನರಿದ್ದರೂ ಮಾಹಿತಿ ನೀಡದ ಸಿಬ್ಬಂದಿಯನ್ನು ಅಮಾನತು ಮಾಡಿ ಗ್ರಾಮಾಂತರ ಎಸ್‌ಪಿ ಆದೇಶ ಹೊರಿಡಿಸಿ ಮಾಲೀಕರಿಗೆ ನೋಟಿಸ್‌ ನೀಡಿದ್ದಾರೆ.

 ಬೆಂಗಳೂರು :  ಎಲೆಕ್ಟ್ರಾನಿಕ್ ಸಿಟಿ ಫಾರ್ಮ್ ಹೌಸ್‌ನಲ್ಲಿ ರೇವ್‌ ಪಾರ್ಟಿ ಪ್ರಕರಣ ಸಂಬಂಧ ಮಾಹಿತಿ ಸಂಗ್ರಹಿಸದೆ ಕರ್ತವ್ಯಲೋಪವೆಸಗಿದ ಆರೋಪದ ಮೇರೆಗೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಸೇರಿದಂತೆ ಮೂವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ ಅಮಾನತುಗೊಳಿಸಿದ್ದಾರೆ.

ಹೆಬ್ಬಗೋಡಿ ಠಾಣೆಯ ಎಎಸ್‌ಐ ನಾರಾಯಣಸ್ವಾಮಿ, ಹೆಡ್ ಕಾನ್‌ಸ್ಟೇಬಲ್‌ ಗಿರೀಶ್ ಹಾಗೂ ಕಾನ್‌ಸ್ಟೇಬಲ್‌ ದೇವರಾಜ್ ಅಮಾನತುಗೊಂಡಿದ್ದು, ಈ ಪ್ರಕರಣ ಸಂಬಂಧ ವಿವರಣೆ ಕೇಳಿ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮೋಹನ್‌ ಹಾಗೂ ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್‌ ಅಯ್ಯಣ್ಣರೆಡ್ಡಿ ಅವರಿಗೆ ಕೇಂದ್ರ ವಲಯ ಐಜಿಪಿ ಮೆಮೋ ನೀಡಿದ್ದಾರೆ.

ರೇವ್ ಪಾರ್ಟಿ ಆಯೋಜನೆಗೊಂಡಿದ್ದ ಫಾರ್ಮ್ ಹೌಸ್ ವ್ಯಾಪ್ತಿಯ ಗಸ್ತು ಹೊಣೆಗಾರಿಕೆಯನ್ನು ಎಎಸ್‌ಐ ನಾರಾಯಣಸ್ವಾಮಿ, ಎಚ್‌ಸಿ ಗಿರೀಶ್ ಹಾಗೂ ಕಾನ್‌ಸ್ಟೇಬಲ್‌ ದೇವರಾಜ್ ನಿರ್ವಹಿಸುತ್ತಿದ್ದರು. ಹಾಗಾಗಿ ಅಂದು ಫಾರ್ಮ್ ಹೌಸ್‌ನಲ್ಲಿ ಹೆಚ್ಚಿನ ಜನರು ಸೇರಿರುವ ಹಾಗೂ ವಾಹನಗಳ ಬಂದಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡದೆ ಕರ್ತವ್ಯ ಲೋಪವೆಗಿಸಿರುವುದು ವಿಚಾರಣೆ ವೇಳೆ ಗೊತ್ತಾಯಿತು. ಈ ಆಧಾರದ ಮೇರೆಗೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್‌.ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ತೆಲುಗು ಚಿತ್ರರಂಗದ ಇಬ್ಬರು ನಟಿಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಿಕ್ಕಿಬಿದ್ದಿರು. ನಗರದ ಹೊರವಲಯದಲ್ಲಿ ಹೊರ ರಾಜ್ಯದವರು ಆಗಮಿಸಿ ಪಾರ್ಟಿ ಆಯೋಜಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ, ಕರ್ತವ್ಯಲೋಪವೆಸಗಿದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಇನ್ನು ಅಂದು ರಾತ್ರಿ ಗಸ್ತಿನಲ್ಲಿದ್ದ ಡಿವೈಎಸ್ಪಿ ಮೋಹನ್ ಕುಮಾರ್ ಹಾಗೂ ಇನ್‌ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರಿಂದ ಕೂಡಾ ಐಜಿಪಿ ಡಾ। ಬಿ.ಆರ್‌.ರವಿಕಾಂತೇಗೌಡ ವಿವರಣೆ ಕೇಳಿದ್ದಾರೆ.ಮಾಲೀಕನಿಗೆ ನೋಟಿಸ್

ರೇವ್ ಪಾರ್ಟಿ ಪ್ರಕರಣ ಸಂಬಂಧ ಜಿ.ಆರ್‌.ಫಾರ್ಮ್ ಹೌಸ್ ಮಾಲಿಕ ಗೋಪಾಲ ರೆಡ್ಡಿ ಅವರಿಗೆ ವಿಚಾರಣೆ ಆಗಮಿಸುವಂತೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿ ಬಳಿಕ ಅಜ್ಞಾತವಾಗಿರುವ ರೆಡ್ಡಿ ಅ‍ವರಿಗೆ ವಿಚಾರಣೆಗೆ ಬರುವಂತೆ ಸೂಚಿಸಿ ಬಿಟಿಎಂ ಲೇಔಟ್‌ನಲ್ಲಿರುವ ಅ‍ವರ ಮನೆಗೆ ಸಿಸಿಬಿ ನೋಟಿಸ್ ಅಂಟಿಸಿದೆ.