ಪೊಲೀಸ್‌ ಇಲಾಖೆ ಶಿಸ್ತಿನ ಇಲಾಖೆ

| Published : Apr 03 2024, 01:37 AM IST

ಸಾರಾಂಶ

ವೀರ, ಧೀರ, ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯ ನಿಷ್ಠೆ ತೋರಿದ ಪೊಲೀಸರನ್ನು ನೆನೆಯುವ ನಿಟ್ಟಿನಲ್ಲಿ ಪ್ರತಿವರ್ಷ ಏ. 2ರಂದು ಪೊಲೀಸ್ ಧ್ವಜ ದಿನ ಆಚರಿಸಲಾಗುತ್ತದೆ.

ಹುಬ್ಬಳ್ಳಿ:

ವೀರ, ಧೀರ, ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯ ನಿಷ್ಠೆ ತೋರಿದ ಪೊಲೀಸರನ್ನು ನೆನೆಯುವ ನಿಟ್ಟಿನಲ್ಲಿ ಪ್ರತಿವರ್ಷ ಏ. 2ರಂದು ಪೊಲೀಸ್ ಧ್ವಜ ದಿನ ಆಚರಿಸಲಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ಎಲ್‌. ಕಸ್ತೂರಿ ಹೇಳಿದರು. ನಗರದ ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತ್‌ ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇರೆ ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನ ಇಲಾಖೆಯಾಗಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸರು ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಮಾತನಾಡಿ, ಕಳೆದ ಬಾರಿ ₹ 33.50 ಲಕ್ಷ ಮೌಲ್ಯದ ಪೊಲೀಸ್ ಧ್ವಜ ಹಂಚಿಕೆ ಮಾಡಲಾಗಿದೆ. ಈ ಸಾರಿ ಹೆಚ್ಚಿನ ಮೊತ್ತದ ಹಣ ಸಂಗ್ರಹಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

2023-24ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಸಮಿತಿ ಸಭೆ ಮಾಡಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನವನ್ನು ₹ 5.18 ಲಕ್ಷ ಹಾಗೂ ನಿಧನ ಹೊಂದಿದ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅಂತ್ಯ ಸಂಸ್ಕಾರಕ್ಕಾಗಿ ₹ 1.20 ಲಕ್ಷ ಧನ ಸಹಾಯ ಮಂಜೂರು ಮಾಡಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಏಪ್ರಿಲ್‌ 2023ರಿಂದ ಮಾರ್ಚ್‌ 2024ರ ವರೆಗೆ ಒಟ್ಟು 652 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅರ್ಹ ಕುಟುಂಬ ಸದಸ್ಯರು ವೈದ್ಯಕೀಯ ಸೌಲಭ್ಯ ಪಡೆದಿರುತ್ತಾರೆ. ಪೊಲೀಸರ ಮಕ್ಕಳ ಎಸ್‌ಎಸ್‌ಎಲ್‌ಸಿ ಹಾಗೂ ನಂತರದ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ₹ 15.7 ಲಕ್ಷ ಮೊತ್ತದ ಶೈಕ್ಷಣಿಕ ಸಹಾಯ ಧನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾರುತಿ ಹೆಗಡೆ ನೇತೃತ್ವದಲ್ಲಿ ವಿವಿಧ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಆರ್.ಕೆ. ಪಾಟೀಲ, ವಿಜಯಕುಮಾರ ತಳವಾರ, ನಿವೃತ್ತ ಡಿಐಜಿಪಿ ರವಿಕುಮಾರ ನಾಯಕ, ನಿವೃತ್ತ ಡಿಸಿಪಿ ಎಚ್.ಎ. ದೇವರಹೊರು, ನಿವೃತ್ತ ಡಿಎಸ್‌ಪಿಗಳಾದ ಆರ್.ಐ. ಅಂಗಡಿ, ಪ್ರಭುದೇವ ಮಾನೆ, ಶಿವಶಂಕರ ಗಡಾದಿ, ವಿ.ಬಿ. ಬೆಳವಡಿ, ನಿವೃತ್ತ ಪಿಐ ಅರುಣಕುಮಾರ ಸಾಳುಂಕೆ, ನಿವೃತ್ತ ಪಿಎಸ್‌ಐ ಆರ್.ಬಿ. ನೀರಲಗಿ, ಎಸ್.ಎನ್. ಬಾಳಿಕಾಯಿ, ವಿ.ಎಸ್. ಅಂಗಡಿ, ಹುಬ್ಬಳ್ಳಿ ಧಾರವಾಡ ನಗರದ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಟ್ರಾಫಿಕ್ ವಾರ್ಡನ್, ಕುಟುಂಬಸ್ಥರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಡಿಸಿಪಿ ರಾಜೀವ ಎಂ. ಸ್ವಾಗತಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್‌ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ರವೀಶ ಸಿ.ಆರ್. ವಂದಿಸಿದರು.