ಕಾನೂನು ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ಸನ್ನದ್ಧ: ಎಂ.ಎಸ್. ಪಾಟೀಲ

| Published : Mar 17 2024, 01:47 AM IST

ಸಾರಾಂಶ

ಜಾತ್ರೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಶಿರಸಿ ಡಿಎಸ್‌ಪಿ ಎಂ.ಎಸ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಸಿ

ರಾಜ್ಯದ ಅತಿ ದೊಡ್ಡ ಜಾತ್ರೆಯಲ್ಲೊಂದಾದ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಹಿತಕರ ಘಟನೆ ನಡೆಯದಂತೆ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಿ, ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಶಿರಸಿ ಡಿಎಸ್‌ಪಿ ಎಂ.ಎಸ್. ಪಾಟೀಲ ಹೇಳಿದರು.

ಶನಿವಾರ ನಗರದ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿ, ಕಳೆದ ಜಾತ್ರೆಯಲ್ಲಿ ೨೩ ರಿಂದ ೨೫ ಲಕ್ಷ ಭಕ್ತಾದಿಗಳು ಆಗಮಿಸಿದ್ದರು. ಈ ವರ್ಷ ೩೦ ಲಕ್ಷ ದಾಟಬಹುದು ಎಂದು ಅಂದಾಜಿಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಆ ಕಾರಣದಿಂದ ಹೆಚ್ಚಿನ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಅತಿ ದೊಡ್ಡ ಸಮಸ್ಯೆಯಾದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ನೀಲನಕ್ಷೆ ಮಾಡಲಾಗಿದೆ ಎಂದರು.

ವಾಹನ ನಿಲುಗಡೆ ಸ್ಥಳ:

ಕುಮಟಾ ಮಾರ್ಗವಾಗಿ ಬರುವ ವಾಹನಗಳಿಗೆ ಜೈನಮಠ (ಶಂಕರ ಹೊಂಡದ ಹತ್ತಿರ), ಮಿಸ್ಗರ್ ಪ್ಲಾಟ್ (ಶಂಕರ ಹೊಂಡದ ರಸ್ತೆ) ಮಿಸ್ಗರ್ ಪ್ಲಾಟ್ -೨ (ಶಂಕರ ಹೊಂಡದ ರಸ್ತೆ), ಪ್ರೊಗ್ರಸ್ಸಿವ್ ಕಾಲೇಜ್ ಮೈದಾನ (ಗಾಂಧಿನಗರರ ರಸ್ತೆ), ರಾಯಪ್ಪ ಹುಲೆಕಲ್ ಶಾಲೆ ಹಿಂಭಾಗ (ಕುಮಟಾ ರಸ್ತೆ), ಅಕ್ಷಯ ಟಿವಿಎಸ್ ಶೋ ರೂಂ ಹತ್ತಿರ (ಕುಮಟಾ ರಸ್ತೆ), ವಿದ್ಯಾಧಿರಾಜ ಕಲಾಕ್ಷೇತ್ರ (ಕುಮಟಾ ರಸ್ತೆ), ವಿದ್ಯಾಧಿರಾಜ ಕಲಾಕ್ಷೇತ್ರದ ಪಕ್ಕ (ಕುಮಟಾ ರಸ್ತೆ), ಯಲ್ಲಾಪುರ ಹಾಗೂ ಹುಬ್ಬಳ್ಳಿ ಮಾರ್ಗವಾಗಿ ಬರುವ ವಾಹನಗಳಿಗೆ ಮಾರಿಕಾಂಬಾ ಪ್ರೌಢ ಶಾಲೆ (ಕೊರ್ಟ ರಸ್ತೆ), ಯೋಗ ಮಂದಿರ (ಕೊರ್ಟ ರಸ್ತೆ), ತೋಟಗಾರ್ಸ ಕಲ್ಯಾಣ ಮಂಟಪದ ಹಿಂಭಾಗ (ಕೊರ್ಟ ರಸ್ತೆ), ಎಸ್.ಬಿ. ಹಿರೇಮಠ ಪ್ಲಾಟ್ (ಟಿ.ವಿ ಸ್ಟೇಷನ್ ರಸ್ತೆ), ಪದ್ಮಶ್ರೀ ಟಾಕೀಸ್ ಆವರಣ (ಝೂ ವೃತ್ತ ಶಿರಸಿ), ಹೊಸ ಬಸ್ ನಿಲ್ದಾಣ (ಗಣೇಶ ನಗರ ರಸ್ತೆ), ಬನವಾಸಿ ಹಾಗೂ ಸೊರಬ ಮಾರ್ಗವಾಗಿ ಬರುವ ವಾಹನಗಳಿಗೆ ಶಿರಸಿಕರ್ ಪ್ಲಾಟ್-೧ (ಶಿರಸಿಕರ್ ಕಾಲೋನಿ ಬನವಾಸಿ ರಸ್ತೆ), ಶಿರಸಿಕರ್ ಪ್ಲಾಟ್-೨ (ಶಿರಸಿಕರ್ ಕಾಲೋನಿ ಬನವಾಸಿ ರಸ್ತೆ), ಸ್ಟೇಟ್ ಬ್ಯಾಂಕ್ ಎದುರುಗಡೆ (ಬನವಾಸಿ ರಸ್ತೆ-ಶಿರಸಿ) ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರಿಗೆ ಗೋಚರಿಸುವಂತೆ ಎಲ್ಲ ಕಡೆಗಳಲ್ಲಿಯೂ ಸೂಚನಾ ನಾಮಫಲಕ ಅಳವಡಿಸಲಾಗುತ್ತದೆ. ಪ್ರತಿ ವೃತ್ತದಲ್ಲಿಯೂ ಸಂಚಾರ ದಟ್ಟಣೆ ನಿಯಂತ್ರಿಸಲು ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲಾಗುತ್ತದೆ ಎಂದರು.

ಜಾತ್ರೆ ಸಮಯದಲ್ಲಿ ಕಳ್ಳತನ ಹಾಗೂ ಇನ್ನಿತರ ಪ್ರಕರಣಗಳನ್ನು ನಿಯಂತ್ರಿಸಲು ಕ್ರೈಂ ಪತ್ತೆ ಹಚ್ಚುವ ನುರಿತ ಸಿಬ್ಬಂದಿ ನೇಮಿಸಕೊಳ್ಳಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಬೀಟ್ ವ್ಯವಸ್ಥೆ ಇನ್ನಷ್ಟು ಬಿಗಿಗೊಳಿಸಲಾಗುತ್ತದೆ. ಓಬ್ಬವ ಪಡೆ, ರೆಸ್ಕ್ಯೂ ಟೀಮ್, ಫೇಸ್ ಡಿಟೆಕ್ಟರ್ ಕ್ಯಾಮೆರಾ ಅಳವಡಿಕೆ, ಹೊರ ಜಿಲ್ಲೆಗಳಲ್ಲಿ ಕಳ್ಳತನ ಮತ್ತು ಮತ್ತಿತರರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಭಾವಚಿತ್ರವನ್ನು ಹಾಕಲಾಗುತ್ತದೆ. ಅವರು ಜಾತ್ರೆಯ ಪೇಟೆಯಲ್ಲಿ ಓಡಾಡಿದರೆ ಕ್ಯಾಮೆರಾ ಅವರ ಚಿತ್ರವನ್ನು ಸೆರೆಹಿಡಿದು ಪೊಲೀಸ್ ಠಾಣೆಗೆ ಅಲರ್ಟ್ ಸಂದೇಶ ಕಳುಹಿಸುತ್ತದೆ. ಆಗ ನಮ್ಮವರು ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಾರೆ ಎಂದ ಅವರು, ಬಿಸಿಲಿನ ತಾಪ ಹೆಚ್ಚಾದ್ದರಿಂದ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಹಿರಿಯರ ನಾಗರಿಕರ ರಕ್ಷಣಾ ಪಡೆ, ಕಮಾಂಡೋ ಟೀಮ್, ಕ್ಯುಆರ್‌ಟಿ ಟೀಮ್ ರಚಿಸಲಾಗಿದೆ. ದಿನದ ಇಪ್ಪತ್ಕಾಲು ಘಂಟೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಲಾಗಿದೆ ಎಂದರು.

ಈ ವೇಳೆ ಸಿಪಿಐ ಶಶಿಕಾಂತ ವರ್ಮಾ, ನಗರಠಾಣೆ ಪಿಎಸ್‌ಐ ನಾಗಪ್ಪ ಬಿ. ಇದ್ದರು.

ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕ

ಜಾತ್ರೆಯ ಬಂದೋಬಸ್ತ್‌ಗಾಗಿ ೪ ಡಿಎಸ್‌ಪಿ, ೧೫ ಸಿಪಿಐ, ೩೭ ಪಿಎಸ್‌ಐ, ೯೦ ಎಎಸ್‌ಐ, ೫೧೪ ಪುರುಷ ಸಿಬ್ಬಂದಿ, ೮೪ ಮಹಿಳಾ ಸಿಬ್ಬಂದಿ, ೨೦ ಟ್ರಾಫಿಕ್ ಸಿಬ್ಬಂದಿ, ೨೧೨ ಗೃಹ ರಕ್ಷಕದಳ, ೩೦೦ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು, ೫ ಕೆಎಸ್‌ಆರ್‌ಪಿ ತುಕಡಿ, ೧೦ ಡಿಎಆರ್ ತುಕಡಿ ನೇಮಿಸಲಾಗಿದೆ ಎಂದು ಡಿಎಸ್‌ಪಿ ಎಂ.ಎಸ್. ಪಾಟೀಲ ತಿಳಿಸಿದರು.

ಸಿಸಿ ಕ್ಯಾಮೆರಾ

ಜಾತ್ರೆ ಸಂದರ್ಭದಲ್ಲಿ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ೧೮೦ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಶಿರಸಿ ಡಿಎಸ್‌ಪಿ ಎಂ.ಎಸ್. ಪಾಟೀಲ ತಿಳಿಸಿದ್ದಾರೆ.