ಸಾಮಾಜದ ಸ್ವಾಸ್ಥ್ಯವನ್ನು ಪೊಲೀಸ್ ಇಲಾಖೆ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ. ಜನರು ಸಮಾಜದಲ್ಲಿ ಶಾಂತಿ, ಸುಖದಿಂದ ಬದುಕಲು ಹಾಗೂ ನಿಶ್ಚಿಂತೆಯಿಂದ ನಿದ್ದೆ ಮಾಡಲು ಕಾರಣ ಪೊಲೀಸರ ಸೇವೆ ಪ್ರಮುಖವಾಗಿದೆ. ಶಿಸ್ತಿನ ಪ್ರತೀಕವಾಗಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ. ನಾವೆಲ್ಲರೂ ಪೊಲೀಸರ ಕಾರ್ಯವನ್ನು ಪ್ರಶಂಸಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೆಮ್ಮದಿಯಿಂದ ಬದುಕು ನಡೆಸಲು ಪೊಲೀಸ್ ಇಲಾಖೆ ಸೇವೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಮ್ಯಾರಾಥಾನ್ ಓಟಕ್ಕೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಇಲಾಖೆ 50 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಸಾಮಾಜದ ಸ್ವಾಸ್ಥ್ಯವನ್ನು ಪೊಲೀಸ್ ಇಲಾಖೆ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ. ಜನರು ಸಮಾಜದಲ್ಲಿ ಶಾಂತಿ, ಸುಖದಿಂದ ಬದುಕಲು ಹಾಗೂ ನಿಶ್ಚಿಂತೆಯಿಂದ ನಿದ್ದೆ ಮಾಡಲು ಕಾರಣ ಪೊಲೀಸರ ಸೇವೆ ಪ್ರಮುಖವಾಗಿದೆ. ಶಿಸ್ತಿನ ಪ್ರತೀಕವಾಗಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ. ನಾವೆಲ್ಲರೂ ಪೊಲೀಸರ ಕಾರ್ಯವನ್ನು ಪ್ರಶಂಸಿಸಬೇಕು ಎಂದರು.

ಮನಸ್ಸು ಮತ್ತು ದೇಹ ಆರೋಗ್ಯಕರವಾಗಿದ್ದಾರೆ ಸದೃಢವಾಗಿ ಕೆಲಸ ನಿರ್ವಹಿಸಬಹುದು. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡು ದೇಹವನ್ನು ದಂಡಿಸಬೇಕು. ಸಮಾಜಕ್ಕೆ ಉತ್ತಮ ಸೇವೆ ಒದಗಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನಮ್ಮ ಆರೋಗ್ಯ ಸೀಮಿತದಲ್ಲಿ ಇರಬೇಕೆಂದರೆ ಪ್ರತಿಯೊಬ್ಬರೂ ಸಧೃಡರಾಗಿರಬೇಕು. ಸದೃಢ ದೇಹಕ್ಕಾಗಿ ನಿತ್ಯ ದೇಹ ದಂಡಿಸಬೇಕು, ಪೊಲೀಸ್ ಇಲಾಖೆಯ ಸಿಬ್ಬಂದಿ ಇದನ್ನು ಸತತವಾಗಿ ಕಾಯ್ದುಕೊಳ್ಳಬೇಕು ಎಂದರು.

ಕರ್ನಾಟಕ ಸ್ಟೇಟ್ ಪೊಲೀಸ್ ರನ್ 5ಕೆ-10ಕೆ ಮ್ಯಾರಥಾನ್ ಓಟವು ಉತ್ತಮ ಆರೋಗ್ಯ, ನಶೆ ಮುಕ್ತ ಕರ್ನಾಟಕ ಅಭಿಯಾನದ ಮೂಲ ಉದ್ದೇಶ ಹೊಂದಿದೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದಡಿ ಮ್ಯಾರಥಾನ್ ಓಟದ ಮೂಲಕ ಜಾಗೃತಿ ಮೂಡಿಸಲಾಯಿತು.

ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳು, ಜನರನ್ನು ಡ್ಯಾನ್ಸ್ ಮೂಲಕ ಉತ್ತೇಜನ ನೀಡಿದ ಚಿತ್ರನಟ ರಿಷಿ, ಬಿಗ್ ಬಾಸ್ ಖ್ಯಾತಿಯ ರಜತ್ ಗಮನ ಸೆಳೆದರು. ಮ್ಯಾರಥಾನ್ ನಲ್ಲಿ ಭಾಗವಹಿಸಿದವರಿಗೆ ಟೀ ಶರ್ಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರ ನಟ ರಿಷಿ, ಬಿಗ್ ಬಾಸ್ ಖ್ಯಾತಿಯ ರಜತ್, ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ದಸಂಸ ಮುಖಂಡ ವೆಂಕಟಗಿರಿಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.