ಸಾರಾಂಶ
ಹೊರ ವಲಯಗಳಲ್ಲಿ ಹಾಗೂ ನಿರ್ಜನ ಪ್ರದೇಶಗಳ ಪ್ರವಾಸಿಗರನ್ನು ಕರೆದ್ಯೊಯುವ ಮುಂಚಿತವಾಗಿ ಸಂಬಂಧಿಸಿದ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅನುಮತಿ ಪಡೆಯಬೇಕು.
ಕೊಪ್ಪಳ:
ಸಾಣಾಪುರ ಬಳಿ ವಿದೇಶಿಗರ ಮೇಲೆ ದಾಳಿ ಮತ್ತು ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ ಪ್ರವಾಸಿ ಸ್ಥಳಗಳು, ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೆ ವಿಶೇಷ ನಿಗಾ ಇರಿಸಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಜತೆಗೆ ವಿಶೇಷ ಭದ್ರತೆಗೂ ಆದೇಶಿಸಿದೆ. ಜತೆಗೆ ಹೊರ ವಲಯಗಳಲ್ಲಿ ಹಾಗೂ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುನ್ನ ಸಂಬಂಧಿಸಿದ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅನುಮತಿ ಪಡೆಯುವಂತೆ ಆದೇಶಿಸಿದೆ.ಸರ್ಕಾರದ ಒಡಾಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಎಸ್.ಆರ್. ಉಮಾಶಂಕರ, ಈ ಕುರಿತು ಸುತ್ತೋಲೆ ಹೊರಡಿಸಿ, ರಾಜ್ಯಾದ್ಯಂತ ಪೊಲೀಸ್ ಇಲಾಖೆ ಮತ್ತು ರೆಸಾರ್ಟ್ ಮಾಲಿಕರಿಗೂ ಹಲವಾರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದ ಪ್ರವಾಸಿ ತಾಣಗಳಲ್ಲಿನ ಹೋಂ ಸ್ಟೇಗಳು ವಿದೇಶಿಗರು ಒಳಗೊಂಡಂತೆ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹೊರ ವಲಯಗಳಲ್ಲಿ ಹಾಗೂ ನಿರ್ಜನ ಪ್ರದೇಶಗಳ ಪ್ರವಾಸಿಗರನ್ನು ಕರೆದ್ಯೊಯುವ ಮುಂಚಿತವಾಗಿ ಸಂಬಂಧಿಸಿದ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅನುಮತಿ ಪಡೆಯಬೇಕು. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ, ಹೊರವಲಯ, ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದ್ಯೊಯ್ದರೆ ದುಷ್ಕರ್ಮಿಗಳಿಂದ, ಕಾಡುಪ್ರಾಣಿಗಳಿಂದಾಗುವ ದುರ್ಘಟನೆಗಳಿಗೆ ಹೋಮ್ ಸ್ಟೇ, ರೆಸಾರ್ಟ್ ಮಾಲಿಕರ ಹೊಣೆಗಾರರಾಗುತ್ತಾರೆ. ಈ ಕುರಿತು ಆಯಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿದೆ.ಕಟ್ಟುನಿಟ್ಟಿನ ಸೂಚನೆಯನ್ನು ರೆಸಾರ್ಟ್ ಮಾಲಿಕರಿಗೆ ನೀಡಿದ್ದೇವೆ ಮತ್ತು ರೆಸಾರ್ಟ್‌ಗಳಿಗೂ ಭೇಟಿ ನೀಡಿ, ಪರಿಶೀಲನೆ ಮಾಡಿದ್ದೇವೆ. ವಿದೇಶಿಯರಿಗೆ ರೂಮ್ ಬುಕ್ಕಿಂಗ್ ನಿಯಮಾನುಸಾರ ಮಾಡಬೇಕು ಮತ್ತು ನಂತರವೂ ಅವರ ಚಲವಲನದ ಮೇಲೆಯೂ ನಿಗಾ ವಹಿಸುವಂತೆಯೂ ಸೂಚಿಸಿದ್ದೇವೆ ಎಂದು ಎಸ್ಪಿ ಡಾ. ರಾಮ ಎಲ್ ಅರಸಿದ್ದಿ ಹೇಳಿದರು.