ಪೊಲೀಸ್‌ ಶ್ವಾನ ಸಾವು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

| Published : Mar 04 2025, 12:35 AM IST

ಪೊಲೀಸ್‌ ಶ್ವಾನ ಸಾವು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ವಾನದ ಮೃತದೇಹವನ್ನು ಇಲ್ಲಿಗೆ ತಂದು ಜಿಲ್ಲಾ ಪೊಲೀಸ್ ಘಟಕದಿಂದ ಸಂತಾಪ ಸೂಚಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಹಾವೇರಿ: ಬಾಂಬ್ ಹಾಗೂ ಸ್ಫೋಟಕ ಪತ್ತೆ ದಳದಲ್ಲಿ ಪರಿಣತಿ ಹೊಂದಿ, ಹಾವೇರಿ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನಕ ಎಂಬ ಶ್ವಾನವು ಹಂಪಿ ಉತ್ಸವದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಕಲ ಸರ್ಕಾರಿ ಗೌರದೊಂದಿಗೆ ಶ್ವಾನದ ಅಂತ್ಯಕ್ರಿಯೆ ನಡೆಸಲಾಯಿತು.

ಲ್ಯಾಬ್ರಡಾರ್ ರಿಟ್ರಿವರ್ ಎಂಬ ತಳಿಯ ಶ್ವಾನ ಇದಾಗಿದ್ದು, ಬೆಂಗಳೂರಿನಲ್ಲಿ 2019ರಲ್ಲಿ 7 ತಿಂಗಳುಗಳ ಕಾಲ ತರಬೇತಿ ಪಡೆದು ನಂತರ ಹಾವೇರಿ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ಮಾಡುತ್ತಿತ್ತು. ಈ ಶ್ವಾನವು ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ಅಧಿವೇಶನ, ವೈಮಾನಿಕ ಪ್ರದರ್ಶನ ಬೆಂಗಳೂರು ಮತ್ತು 2023ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2024ನೇ ಸಾಲಿನ ಲೋಕಸಭಾ ಚುನಾವಣೆ ಕರ್ತವ್ಯ, ಪ್ರಧಾನ ಮಂತ್ರಿಗಳ ಬಂದೋಬಸ್ತ್‌ ಕರ್ತವ್ಯ ಹಾಗೂ ಅನೇಕ ಗಣ್ಯ ವ್ಯಕ್ತಿಗಳ ಬಂದೋಬಸ್ತ್‌ ಸೇರಿದಂತೆ 80ಕ್ಕಿಂತ ಹೆಚ್ಚು ಕಾರ್ಯಕ್ರಮಗಳ ಬಂದೋಬಸ್ತ್‌ನಲ್ಲಿ ಕನಕ ಕರ್ತವ್ಯ ನಿರ್ವಹಿಸಿತ್ತು. ಹಂಪಿ ಉತ್ಸವದ ಕರ್ತವ್ಯಕ್ಕೆ ಎಎಸ್ಸಿ ತಂಡದೊಂದಿಗೆ ತೆರಳಿದ್ದ ಶ್ವಾನವು, ಮಾ. 2ರಂದು ಬೆಳಗ್ಗೆ ವಾಕಿಂಗ್‌ಗೆ ತೆರಳಿದ ಸಂದರ್ಭದಲ್ಲಿ ಕಮಲಾಪುರ ಕಡೆಯಿಂದ ಬರುತ್ತಿದ್ದ ಸಿಂಧನೂರು ಡಿಪೋದ ಸಾರಿಗೆ ಸಂಸ್ಥೆ ಬಸ್‌ ಚಾಲಕನ ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆಯಿಂದ ಬಸ್‌ ಎಡಭಾಗದ ಚಕ್ರವು ಶ್ವಾನದ ಮೇಲೆ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶ್ವಾನವನ್ನು ಚಿಕಿತ್ಸೆಗೆ ಹೊಸಪೇಟೆ ಪಶು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿತ್ತು.

ಶ್ವಾನದ ಮೃತದೇಹವನ್ನು ಇಲ್ಲಿಗೆ ತಂದು ಜಿಲ್ಲಾ ಪೊಲೀಸ್ ಘಟಕದಿಂದ ಸಂತಾಪ ಸೂಚಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಪೊಲೀಸ್‌ ಸಿಬ್ಬಂದಿ ಕಣ್ಣೀರಿಟ್ಟರು. ಬಂದೋಬಸ್ತ್‌ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದ್ದ, ಕನಕ ಶ್ವಾನ ಇನ್ನಿಲ್ಲ ಎಂಬುದನ್ನು ಕಂಡು ಶ್ವಾನ ದಳದ ಸಿಬ್ಬಂದಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟರು. ತನ್ನದಲ್ಲದ ತಪ್ಪಿನಿಂದ ಕನಕ ಸಾವು ಕಂಡಿರುವುದಕ್ಕೆ ಇಡೀ ಪೊಲೀಸ್ ಇಲಾಖೆ ಮಮ್ಮಲ ಮರುಗಿತು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

ಶಿಗ್ಗಾಂವಿ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ಬಂದ್‌ ಮಾಡಬೇಕೆಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಆಗ್ರಹಿಸಿದರು.ತಾಲೂಕಿನ ಬನ್ನೂರ ಗ್ರಾಮದಲ್ಲಿ ಮಹಿಳೆಯರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಬಹುತೇಕವಾಗಿ ದಿನಗೂಲಿ ಮಾಡುವಂತವರಾಗಿದ್ದು, ಪ್ರತಿದಿನ ದುಡಿದ ಹಣವನ್ನು ಕುಡಿತಕ್ಕೆ ಹಾಳು ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟವು ಕಾನೂನುಬಾಹಿರವಾಗಿದೆ.ಕೂಡಲೇ ತಾಲೂಕು ಆಡಳಿತ ಎಚ್ಚೆತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಕ್ರಮ ಮದ್ಯ ಮಾರಾಟದ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರ ಜೊತೆಗೂಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿವಾನಂದಯ್ಯ ಹಿರೇಮಠ, ಮಹಾಲಿಂಗಯ್ಯ ಚಿಕ್ಕಮಠ, ಕುಬೇರಗೌಡ ಪೊಲೀಸಗೌಡ್ರ, ಶಂಭನಗೌಡ ಪೊಲೀಸಪಾಟೀಲ್, ಟಾಕಣಗೌಡ ವಿ. ಪಾಟೀಲ, ವೀರನಗೌಡ ಸಿ. ಪಾಟೀಲ ಎಫ್.ವಿ. ಪೊಲೀಸಗೌಡ್ರ, ದೇವೇಂದ್ರಪ್ಪ ಮಾ. ಬಡಿಗೇರ, ಬಸವಂತಪ್ಪ ಮಡಿವಾಳರ, ಧರಣೇಂದ್ರಪ್ಪ ಹೊನ್ನಪ್ಪನವರ, ನಿಸ್ಸಿಮಪ್ಪ ಗಾಣಿಗೇರ, ಗುರುಬಸಪ್ಪ ಹಡಪದ, ಬಾಪುಗೌಡ ಪಾಟೀಲ, ಹಸನಸಾಬ ಶೇಖಸನದಿ, ಮಹದೇವಪ್ಪ ಅಗಡಿ, ಗುಡ್ಡಪ್ಪ ಹರಿಜನ, ಸವಿತಾ ಕುನ್ನೂರ, ನೀಲವ್ವ ದೊಡ್ಡಮನಿ, ಚನ್ನವ್ವ ಮೆಳ್ಳಾಗಟ್ಟಿ, ಮಾದೇವಿ ದೊಡ್ಡಮನಿ, ಲಕ್ಷ್ಮವ್ವ ಮೂಕಪ್ಪನವರ, ಶಾಂತವ್ವ ದುಂಡಿಗೌಡ್ರ, ಮಂಜುಳಾ ಮೂಕಪ್ಪನವರ, ಕಲ್ಪನಾ ದೊಡ್ಮನಿ, ಗಂಗವ್ವ ಮೆಳ್ಳಾಗಟ್ಟಿ, ಪುಷ್ಪಾ ಮಡಿವಾಳರ, ನೇತ್ರಾ ಮೆಳ್ಳಾಗಟ್ಟಿ ಇತರರು ಭಾಗವಹಿಸಿದ್ದರು.