ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ

ಸಿರುಗುಪ್ಪ: ನಗರದ ಬಳ್ಳಾರಿ ರಸ್ತೆಯ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಹಿಂದೂ ಮಹಾಸಭಾದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಶೋಭಯಾತ್ರೆ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಮೆರವಣಿಗೆಯು ಯಾವುದೇ ವಿಘ್ನವಿಲ್ಲದೆ ಶಾಂತಿಯುತವಾಗಿ ಸಾಗಲು ಪೊಲೀಸ್ ಇಲಾಖೆಯು ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಹಾಗೂ ಖಾಕಿ ಕಣ್ಗಾವಲು ಏರ್ಪಡಿಸಿದೆ.

ಗಣೇಶ ಮೂರ್ತಿಯ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳು ಹಾಗೂ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಉತ್ಸವದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಹಾಗೂ ಅಧಿಕಾರಿಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಇಲಾಖೆ ಆದ್ಯತೆ ನೀಡಿದೆ.

ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ನಗರದಲ್ಲಿ ವಾಹನ ದಟ್ಟಣೆ ಉಂಟಾಗದಂತೆ ಸಂಚಾರ ವ್ಯವಸ್ಥೆಯ ಮೇಲೂ ವಿಶೇಷ ನಿಗಾ ವಹಿಸಲಾಗಿದೆ. ವಾಹನ ಸವಾರರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಹಾಗೂ ಅಗತ್ಯ ಸಂಚಾರ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ.

ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಒಟ್ಟು 918 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ 4 ಡಿಎಸ್ಪಿ, 13 ಸಿಪಿಐ, 27 ಪಿಎಸ್ಐ, 60 ಎಎಸ್‌ಐ, 476 ಪೊಲೀಸ್ ಪೇದೆಗಳು ಹಾಗೂ 338 ಗೃಹರಕ್ಷಕ ಸಿಬ್ಬಂದಿ ಸೇರಿದ್ದಾರೆ. ಇದರೊಂದಿಗೆ ಹೆಚ್ಚುವರಿ ಭದ್ರತೆಗಾಗಿ 4 ಐಆರ್‌ಬಿ ಬೆಟಾಲಿಯನ್ ಹಾಗೂ 7 ಡಿಎಆರ್ ಬೆಟಾಲಿಯನ್ ಪಡೆ ಸಹ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಗಣೇಶೋತ್ಸವದ ಸಂಭ್ರಮ ಸೌಹಾರ್ದತೆಯಿಂದ ಆಚರಿಸಲು ಭಕ್ತರು ಮತ್ತು ನಾಗರಿಕರು ಪೊಲೀಸರೊಂದಿಗೆ ಪೂರ್ಣ ಸಹಕಾರ ನೀಡಬೇಕು. ಸಾರ್ವಜನಿಕರು ಶಾಂತಿ ಕಾಪಾಡಿಕೊಂಡು ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬ ಯಶಸ್ವಿಗೊಳಿಸಬೇಕಾಗಿ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.