ಸಾರಾಂಶ
ರಾಮನಗರ: ಜಿಲ್ಲೆಯ ವಿವಿಧೆಡೆ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಕಳೆದೊಂದು ತಿಂಗಳ ಅವಧಿಯಲ್ಲಿ 9 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 1.12 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಗಳಲ್ಲಿ 28 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಸಿಗಳಿಂದ ಒಟ್ಟು 1.12 ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಕನಕಪುರ ಸಮೀಪದ ಶಿವನಹಳ್ಳಿ ಬಳಿ ಒಂಟಿಮನೆ ದರೋಡೆಗೆ ಯತ್ನಿಸಿದ್ದ ಆರೋಪಿಗಳನ್ನು ಸಹ 2 ದಿನಗಳಲ್ಲಿ ಬಂಧಿಸಿದ್ದಾರೆ. ಇದೇ ಮಾದರಿಯಲ್ಲಿ ಜನವರಿ ತಿಂಗಳಿನಲ್ಲಿ ಜಿಲ್ಲೆಯ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ವಾಹನ, ಚಿನ್ನ-ಬೆಳ್ಳಿ ಸೇರಿದಂತೆ ಕಳುವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಹನ್ಸ್ ಪ್ಯಾಕೆಟ್ ತುಂಬಿರುವ 85 ಚೀಲ, ಸುಣ್ಣದ ಪ್ಯಾಕೆಟ್ ತುಂಬಿರುವ 298 ಚೀಲ ಹಾಗೂ 1 ಈಚರ್ ಲಾರಿಯನ್ನು ಕಳವು ಮಾಡಲಾಗಿತ್ತು. 2025ರ ಜ.1ರಂದು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ದಸ್ತಗಿರಿ ನಡೆಸಿದ್ದಾರೆ. ಬಿಡದಿ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನದಲ್ಲಿ ಒಂದು ಕಾರು, 11 ಕೆಜಿ ಬೆಳ್ಳಿ, 277 ಗ್ರಾಂ ಚಿನ್ನಾಭರಣ ಕಳ್ಳತನ ಆಗಿತ್ತು.ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5.40 ಲಕ್ಷ ನಗದು ಸೇರಿದಂತೆ 3 ಸಿಸಿಟಿವಿ, 1 ಮಾನಿಟರ್, ಮನೆಗಳವು ಪ್ರಕರಣದಲ್ಲಿ 60 ಗ್ರಾಂ ಚಿನ್ನ, ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 247 ಗ್ರಾಂ ಚಿನ್ನಾಭರಣ ಕಳವು ಪ್ರಕರಣ, ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ನಗದು, ಸ್ಮಾರ್ಟ್ ಫೋನ್ ಸೇರಿದಂತೆ ಎಂ.ಕೆ.ದೊಡ್ಡಿಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.
ಈ ಎಲ್ಲ ಕಳ್ಳತನ ಪ್ರಕರಣಗಳು 2023ರಲ್ಲಿ ದಾಖಲಾಗಿದ್ದವು. ಒಂದೂವರೆ ವರ್ಷದಿಂದ ಪೊಲೀಸರಿಗೆ ತಲೆನೋವಾಗಿದ್ದ ಈ ಪ್ರಕರಣಗಳಲ್ಲಿ ಒಟ್ಟು 28 ಕಳ್ಳರು ಭಾಗಿಯಾಗಿದ್ದರು. ಆದರೆ, ನಿರ್ದಿಷ್ಟ ಗ್ಯಾಂಗ್‌ಗಳು ಈ ದರೋಡೆಯಲ್ಲಿರಲಿಲ್ಲ. ಪ್ರತಿ ಕಳ್ಳತನದಲ್ಲಿಯು ಹೊಸ ಮುಖಗಳು ಕಾಣಿಸಿಕೊಂಡಿವೆ. ಈ ಪ್ರಕರಣಗಳೆಲ್ಲವನ್ನು 2025ರ ಜನವರಿ ತಿಂಗಳಿನಲ್ಲಿಯೇ ಪೊಲೀಸರು ಪತ್ತೆ ಮಾಡಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.ಜಿಲ್ಲಾ ಪೊಲೀಸ್ ಇಲಾಖೆ ದಾಖಲಿಸಿದ್ದ ಪ್ರಕರಣಗಳ ಪೈಕಿ 137 ಪ್ರಕರಣಗಳು ವಿಲೇಯಾಗಿದ್ದು, 26 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. 2020 ರಲ್ಲಿ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನು 26 ಪ್ರಕರಣಗಳಲ್ಲಿ 37 ಮಂದಿಗೆ ನ್ಯಾಯಾಲಯ ದಂಡ ವಿಧಿಸಿದೆ.ಮನೆಗಳ್ಳತನ ಪ್ರಕರಣ ಹೆಚ್ಚಳ:
ಇತ್ತಿಚೆಗೆ ಮನೆಗಳವು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಹೊಸ ಮುಖಗಳು ಕಳ್ಳತನದಲ್ಲಿ ಭಾಗಿಯಾಗುತ್ತಿವೆ. ಈ ಹಿಂದಿನ ಪ್ರಕರಣಗಳಲ್ಲಿ ರ್ನಿಷ್ಟ ಗ್ಯಾಂಗ್ ಇಲ್ಲವೇ, ರ್‍ಯಾಡಮ್ ಮಾದರಿಯಲ್ಲಿ ಮೂರ್‍ನಾಲ್ಕು ಮಂದಿ ಖದೀಮರು, ಪೊಲೀಸರಿಗೆ ಚಳ್ಳುಹಣ್ಣು ತಿನ್ನಿಸಿ ಕಳ್ಳತನ ನಡೆಸುತ್ತಿದ್ದರು. ಆದರೀಗ, ಏರಿಕೆಯಾಗುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಅಪ್ರಪ್ತಾರು ಮಾತ್ರವಲ್ಲದೇ, ಆನ್‌ಲೈನ್ ಗೇಮಿಂಗ್, ಆಪ್‌ಗಳಲ್ಲಿ ಸಾಲ ಪಡೆದವರೇ ಹೆಚ್ಚಾಗಿದ್ದಾರೆ.ಕಳ್ಳತನ, ದರೋಡೆ ಪ್ರಕರಣಗಳಿಂದ ಆದಷ್ಟು ಮುನ್ನೆಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸಹ ತಮ್ಮ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಜತೆಗೆ ಆನ್‌ಲೈನ್ ಚಟಕ್ಕೆ ಬಲಿಯಾಗಿ ಕಳ್ಳತನಕ್ಕಿಳಿಯುತ್ತಿರುವ ಯುವ ಸಮುದಾಯಕ್ಕೂ ಖಡಕ್ ಎಚ್ಚರಿಕೆ ನೀಡುತ್ತಿದೆ.
ಬಾಕ್ಸ್ ..............ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ:
ನ್ಯಾಯಾಲಯದ ಎಲ್ ಪಿಆರ್ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 1988ನೇ ಸಾಲಿನಲ್ಲಿ ದಾಖಲಾಗಿದ್ದ ಕುದೂರು ಪೊಲೀಸ್ ಠಾಣೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ವಾರಂಟ್ ಮತ್ತು ಪ್ರೊಕ್ಲಮೇಷನ್ ಹೊರಡಿಸಲಾಗಿದ್ದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ಪ್ರಕರಣ ದಾಖಲು ಮಾಡಲಾಗಿತ್ತು.