ಸಾರಾಂಶ
ಕಾರವಾರ: ಶಾಲಾ ವಾಹನವೊಂದು ಪಂಚರ್ ಆಗಿ ಮಾರ್ಗ ಮಧ್ಯದಲ್ಲೇ ನಿಂತಿದ್ದ ವೇಳೆ ಪೊಲೀಸ್ ಇಲಾಖೆಯ ಹೆದ್ದಾರಿ ಗಸ್ತು ವಾಹನ ಸಿಬ್ಬಂದಿ ವಾಹನದ ಟೈರ್ ಬದಲಿಸಲು ನೆರವಾಗಿದ್ದಾರೆ. ಪೊಲೀಸ್ ಸಿಬ್ಬಂದಿ ದೇವಾನಂದ ಹಾಗೂ ಕಿರಣ ನಾಯ್ಕ ಸಹಾಯ ಹಸ್ತ ಚಾಚಿದವರಾಗಿದ್ದು, ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕುಮಟಾ ತಾಲೂಕಿನ ಅಂತ್ರವಳ್ಳಿ ಬಳಿ ಬುಧವಾರ ಸಂಜೆ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಂಚರ್ ಆಗಿ ನಿಂತಿತ್ತು. ಬಸ್‌ನ ಚಾಲಕ ಒಬ್ಬನೇ ಇದ್ದ ಕಾರಣ ಟೈರ್ ಬದಲಿಸಲಾಗದೇ ತೊಂದರೆ ಉಂಟಾಗಿತ್ತು.
ಈ ವೇಳೆ ಅಂತ್ರವಳ್ಳಿ ಮಾರ್ಗವಾಗಿ ಆಗಮಿಸಿದ ಹೆದ್ದಾರಿ ಗಸ್ತು ವಾಹನದಲ್ಲಿ ಪೊಲೀಸರು ಶಾಲಾ ಬಸ್ ನಿಂತಿದ್ದನ್ನು ಗಮನಿಸಿ ವಿಚಾರಿಸಿದ್ದಾರೆ.ಬಸ್ ಚಾಲಕ ಅಸಹಾಯಕತೆ ತೋಡಿಕೊಂಡಾಗ ಸಹಾಯಕ್ಕೆ ಮುಂದಾದ ದೇವಾನಂದ, ಕಿರಣ ತಾವೇ ಸ್ಟೆಪ್ನಿ ಟೈರ್‌ಅನ್ನು ತೆಗೆದು ಪಂಚರ್ ಆಗಿದ್ದ ಟೈರ್‌ಅನ್ನು ಬದಲಿಸಿ ಕೊಟ್ಟಿದ್ದಾರೆ. ಕೇವಲ ಅಪರಾಧಗಳು ನಡೆದಾಗ ಮಾತ್ರವಲ್ಲ, ಸಾರ್ವಜನಿಕರ ಸಮಸ್ಯೆಗಳಿಗೂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನೆರವಾಗುತ್ತಾರೆ ಎನ್ನುವುದನ್ನು ಪೊಲೀಸರು ತೋರಿಸಿಕೊಟ್ಟಿದ್ದಾರೆ.ಬಸ್ ಸರಿಯಾದ ಬಳಿಕ ವಿದ್ಯಾರ್ಥಿಗಳು ಸಂತಸಗೊಂಡು ಪೊಲೀಸರಿಗೆ ಧನ್ಯವಾದ ತಿಳಿಸಿ ತೆರಳಿದ್ದಾರೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಹಾಕಿ ಅಭಿನಂದಿಸಿದ್ದಾರೆ.
ಅಪರಿಚಿತ ದುಷ್ಕರ್ಮಿಗಳಿಂದ ಕುಟುಂಬಸ್ಥರ ಮೇಲೆ ಹಲ್ಲೆ
ಸಿದ್ದಾಪುರ: ತಾಲೂಕಿನ ತಂಡಾಗುಂಡಿ ಗ್ರಾಪಂ ವ್ಯಾಪ್ತಿಯ ಹಂದ್ಯಾನೆಯ ದೇವರು ನಾರಾಯಣ ಭಟ್ಟ ಅವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಅವರ ಕುಟುಂಬದ ೫ ಜನರ ಮೇಲೆ ಗಂಭೀರ ಹಲ್ಲೆ ನಡೆಸಿದ ಘಟನೆ ಅ. ೨೨ರ ಮಧ್ಯಾಹ್ನ ಜರುಗಿದೆ.ದೂರು ನೀಡಿರುವ ದೇವರು ನಾರಾಯಣ ಭಟ್ಟ(೬೧) ಸೇರಿದಂತೆ ಭಾಗಿರಥಿ ನಾರಾಯಣ ಭಟ್ಟ(೮೩), ಗಣಪತಿ ನಾರಾಯಣ ಭಟ್ಟ(೬೪)ಮಹಾಬಲೇಶ್ವರ ನಾರಾಯಣ ಭಟ್ಟ(೫೮), ಮಂಜುನಾಥ ನಾರಾಯಣ ಭಟ್ಟ(೫೭) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ನೆಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಈ ಭಾಗದ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.