ಸಾರಾಂಶ
ಕಡೂರು, ಪಟ್ಟಣ ಸಮೀಪದ ಮಲ್ಲೇಶ್ವರ-ಮಚ್ಚೇರಿ ನಡುವಿನ ರಸ್ತೆ ಬದಿಯಲ್ಲಿ ಸ್ಕೂಟಿಯೊಂದಿಗೆ ನಿಂತು ಪೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಪೊಲೀಸ್ ಜೀಪ್ ಗುದ್ದಿ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಕನ್ನಡಪ್ರಭ ವಾರ್ತೆ, ಕಡೂರು
ಪಟ್ಟಣ ಸಮೀಪದ ಮಲ್ಲೇಶ್ವರ-ಮಚ್ಚೇರಿ ನಡುವಿನ ರಸ್ತೆ ಬದಿಯಲ್ಲಿ ಸ್ಕೂಟಿಯೊಂದಿಗೆ ನಿಂತು ಪೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಪೊಲೀಸ್ ಜೀಪ್ ಗುದ್ದಿ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.ತಾಲೂಕಿನ ಸಿಂಗಟಗೆರೆ ಹೋಬಳಿ ಪಟ್ಟೇದೇವರಹಳ್ಳಿ ಗ್ರಾಮದ ಗಂಗೋಜಿರಾವ್(47) ಮೃತಪಟ್ಟ ದುರ್ದೈವಿ. ಮಚ್ಚೇರಿ ಬಳಿಯ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದರು. ಕಡೂರು ಪಟ್ಟಣದಿಂದ ಸಿಂಗಟಗೆರೆ ಪೊಲೀಸ್ ಠಾಣೆ ಜೀಪ್ ಚಾಲಕ ಶಿವಕುಮಾರ್ ರಸ್ತೆ ಬದಿಯಲ್ಲಿದ್ದ ಸ್ಕೂಟಿಗೆ ಗುದ್ದಿ ಜೀಪನ್ನು ನಿಲ್ಲಿಸದೆ ಹೊರಟು ಹೋಗಿದ್ದು, ಪೊಲೀಸ್ ಚಾಲಕನ ವರ್ತನೆಗೆ ಮೃತನ ಪತ್ನಿ, ಸಂಭಂಧಿಕರು ಆಕ್ರೋಶ ವ್ಯಕ್ತಪಡಿಸಿ ಚಾಲಕನನ್ನು ಬಂಧಿಸುವ ತನಕ ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಕೆಲ ಕಾಲ ಪಟ್ಟುಹಿಡಿದರು.
ಸ್ಥಳಕ್ಕೆ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್, ಕಡೂರು ಸಿಪಿಐ ರಫೀಕ್, ಪಿಎಸೈಗಳಾದ ಪವನ್‍ಕುಮಾರ್ ಮತ್ತು ಧನಂಜಯ್ ಮೃತನ ಕುಟುಂಬ ವರ್ಗದವರನ್ನು ಸಮಾಧಾನಗೊಳಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಅನುವು ಮಾಡಿಕೊಟ್ಟರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಇಲಾಖೆ ಜೀಪ್ ಚಾಲಕ ಶಿವಕುಮಾರನನ್ನು ಅಮಾನತ್ತು ಮಾಡಿದ್ದಾರೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿವಕುಮಾರ್ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.19ಕೆಕೆಡಿಯು2.ವ್ಯಕ್ತಿಯೋರ್ವರಿಗೆ ಗುದ್ದಿದ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪು.