ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬೇಲೂರು ತಾಲೂಕಿನ ಹಾಲಲ್ತೊರೆ ಕೊಪ್ಪಲು ಗ್ರಾಮದ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವಿರುದ ನಾಮಫಲಕಗಳನ್ನು ತೆರವುಗೊಳಿಸಲು ಬೇಲೂರು ತಾಲೂಕಿನ ಶಾಸಕರಾದ ಹುಲ್ಲಳ್ಳಿ ಸುರೇಶ್ ಹುನ್ನಾರ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೂ ನಾಮಫಲಕ ತೆರವುಗೊಳಿಸಬಾರದು ಎಂದು ದಲಿತ ಹಿರಿಯ ಮುಖಂಡ ಎಚ್.ಕೆ . ಸಂದೇಶ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಬೇಲೂರು ತಾಲೂಕಿನ ಹಾಲ್ತೊರೆ ಕೊಪ್ಪಲು ಗ್ರಾಮದ ದಲಿತ ಕಾಲೋನಿಗೆ ಹೋಗುವ ರಸ್ತೆಯ ಬಲ ಬದಿಯಲ್ಲಿ ಅಲ್ಲಿನ ದಲಿತ ಯುವಕರು ಮತ್ತು ಗ್ರಾಮಸ್ಥರು ೨೦೨೧ರಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರವಿರುವ ಫಲಕವನ್ನು ಗ್ರಾಮದ ದಲಿತ ಕೇರಿಗೆ ಹೋಗುವ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿದೆ. ಇದು ರಸ್ತೆಗಾಗಲಿ, ಸಾರ್ವಜನಿಕರಿಗಾಗಲಿ ಯಾವುದೇ ಸಮಸ್ಯೆಯಾಗಿರುವುದಿಲ್ಲ. ಮತ್ತು ಇದರಿಂದ ಈ ಊರಿನ ಯಾವ ಜಾತಿ, ಸಮುದಾಯಗಳ ಹಾಗೂ ಗ್ರಾಮಸ್ಥರಿಂದ ಯಾವುದೇ ವಿರೋಧವೂ ಇಲ್ಲ. ಇತ್ತೀಚೆಗೆ ಬೀಟ್ ಪೊಲೀಸರಿಗೆ ಅಂಬೇಡ್ಕರ್ ಪ್ರತಿಮೆಯ ಫಲಕವು ಕೆಂಗಣ್ಣಿಗೆ ಬಿದ್ದು, ಇದನ್ನು ಸ್ಥಾಪಿಸಲು ಪಾರವಾನಗಿ ಇದೆಯಾ ಎಂದು ಅಲ್ಲಿದ್ದ ದಲಿತ ಯುವಕರು ಗ್ರಾಮಸ್ಥರಿಗೆ ಕೇಳಿ ಅದನ್ನು ತೆರವುಗೊಳಿಸಬೇಕೆಂದು ತಿಳಿಸಿದ್ದಾರೆ ಎಂದರು.ಇದೇ ಗ್ರಾಮದಲ್ಲಿ ಯುವಕರು ನಟ ಪುನೀತ್ ರಾಜ್‌ಕುಮಾರ್ ಪ್ರತಿಮೆಯನ್ನು ಸ್ಥಾಪಿಸಿ ಶೆಡ್ ನಿರ್ಮಾಣ ಮಾಡುತ್ತಿದ್ದರು. ಇದಕ್ಕೂ ಸಹ ಅಲ್ಲಿನ ಯಾವುದೇ ಗ್ರಾಮಸ್ಥರಿಂದ ವಿರೋಧ ವ್ಯಕ್ತಪಡಿಸಿರುವುದಿಲ್ಲ. ಬದಲಾಗಿ, ಅದಕ್ಕೆ ಬೆಂಬಲಿಸಿ ಸಹಕಾರ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಳೇಬೀಡು ಪೊಲೀಸರು ಅಲ್ಲಿಗೆ ಬಂದು ಇದು ವಿದ್ಯುತ್ ತಂತಿಯ ಪಕ್ಕದಲ್ಲಿದೆ. ಇಲ್ಲಿರುವ ಪುನೀತ್ ರಾಜ್‌ಕುಮಾರ್ ಪ್ರತಿಮೆ ಮತ್ತು ಶೆಡ್ ತೆರವುಗೊಳಿಸಬೇಕೆಂದು ಅಲ್ಲಿಯ ಯುವಕರು ಹಾಗು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹಳೇಬೀಡು ಪೊಲೀಸ್ ಇನ್ಸ್‌ಪೆಕ್ಟರ್ ಜಯರಾಂ ರವರು ಬೇಲೂರಿನ ಶಾಸಕ ಹುಲ್ಲಳ್ಳಿ ಸುರೇಶ್ ಜೊತೆ ಮೊಬೈಲ್ ಕರೆ ಮಾಡಿ ಮಾತನಾಡಿರುವ ಆಡಿಯೋ ಸಂಭಾಷಣೆ ಹೊರಬಂದಿದ್ದು, ಆ ಸಂಭಾಷಣೆಯಲ್ಲಿ ಹಾಲ್ತೊರೆ ಕೊಪ್ಪಲಿನಲ್ಲಿ ಸ್ಥಾಪಿಸುತ್ತಿರುವ ನಟ ಪುನೀತ್ ರಾಜ್ ಕುಮಾರ್ ಪ್ರತಿಮೆ ತೆರವುಗೊಳಿಸುವ ವಿಚಾರವಾಗಿ ಮಾತನಾಡುವಾಗ, ದಲಿತ ಕೇರಿಯಲ್ಲಿ ಅಂಬೇಡ್ಕರ್ ಪ್ರತಿಮೆ ಇದೆಯಲ್ಲ ಅದನ್ನು ಏನು ಮಾಡುತ್ತೀರಾ..?! ಎಂಬಂತೆ ಶಾಸಕರು ಮಾತನಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮತ್ತು ಟಿ.ಆರ್. ವಿಜಯಕುಮಾರ್ ಮಾತನಾಡಿ, ೨೦೨೪ ಸೆಪ್ಟಂಬರ್ ೧೭ರಂದು ಹುಲುಗುಂಡಿ ಗ್ರಾಮ ಪಂಚಾಯತಿಯಿಂದ ಹಾಲ್ತೊರೆ ಕೊಪ್ಪಲು ಗ್ರಾಮದ ದಲಿತ ಕಾಲೋನಿಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ಮತ್ತು ಶೆಡ್ ನ್ನು ತೆರವುಗೊಳಿಸಬೇಕೆಂದು ನೋಟಿಸ್ ನೀಡಿಲಾಗಿದೆ. ಈ ಬೆಳವಣಿಗೆಯಿಂದ ವಿನಾಕಾರಣ ಪರಿಶಿಷ್ಟ ಜಾತಿ ಸಮುದಾಯ ಮತ್ತು ಇತರ ಜಾತಿ ಸಮುದಾಯದ ಜನರ ನಡುವೆ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು, ಗ್ರಾಮದ ಸೌಹಾರ್ದ ವಾತಾವರಣಕ್ಕೆ ಧಕ್ಕೆಯುಂಟು ಮಾಡುವಂತಿದೆ. ಇದಕ್ಕೆಲ್ಲಾ ಶಾಸಕ ಹುಲ್ಲಳ್ಳಿ ಸುರೇಶ್ ರವರ ನೇರ ಕುಮ್ಮಕ್ಕು ಇದ್ದಂತೆ ಕಾಣುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸಬಾರದೆಂದು ಆಗ್ರಹಿಸುತ್ತೇವೆ. ಪುನೀತ್ ರಾಜ್‌ಕುಮಾರ್ ಪುತ್ಥಳಿ ಸ್ಥಾಪಿಸಲೂ ಅವಕಾಶ ನೀಡಬೇಕೆಂದು ಮತ್ತು ಗ್ರಾಮದಲ್ಲಿ ಯಾವುದೇ ಜಾತಿ ಸಂಘರ್ಷಕ್ಕೆ ಎಡೆ ಮಾಡದಂತೆ, ಸೌಹಾರ್ದ ವಾತಾವರಣಕ್ಕೆ ದಕ್ಕೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಈ ಮೂಲಕ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟವು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಬೇಲೂರು ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ಡಿ. ಎಚ್.ಎಸ್. ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಹಾಲ್ತೋರೆ ಕೊಪ್ಪಲು ಮೋಹನ್ ಕುಮಾರ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.