ಸಾರಾಂಶ
ಕನ್ನಡಪ್ರಭವಾರ್ತೆ ಶಹಾಬಾದ
ಆಯೋಧ್ಯೆಯಲ್ಲಿ ಶ್ರೀರಾಮ ಲಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಶುಭ ಸಂದರ್ಭದಲ್ಲಿ ನಗರದ ವಿವಿಧ ವೃತ್ತದಲ್ಲಿ ಶ್ರೀರಾಮ ಭಕ್ತರು ಜಯಶ್ರೀರಾಮ ಘೋಷಣೆ ಕೂಗುತ್ತ, ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷೋದ್ಗಾರ ಗೈದರು.ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಲೇ ನಗರದ ಪ್ರತಿ ವೃತ್ತದಲ್ಲಿ ಶ್ರೀರಾಮನ ವಿವಿಧ ಭಂಗಿಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪ್ರತಿ ವೃತ್ತದಲ್ಲೂ ಮಹಾ ಪ್ರಸಾವ ವಿತರಣೆ ನಡೆಸಿದರು. ನಗರದ ಮಾರ್ವಾಡಿ ಸಮಾಜದ ಯುವಕರು ಸ್ವಯಂ ಪ್ರೇರಿತರಾಗಿ ಲಾಡು ಹಂಚಿ ತಮ್ಮ ಭಕ್ತಿಯನ್ನು ಮೆರೆದರು.
ಸೋಮವಾರ ಬೆಳಗ್ಗೆ ನಗರದ ಜೆಪಿ ಕಾಲೋನಿಯಲ್ಲಿರುವ 70 ದಶಕದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮಾತಾ, ಹಣಮಂತ ದೇವರಿಗೆ ಅರ್ಚಕರಾದ ಶ್ರೀಪಾದ ಭಟ್ಟ ಸೋಮಯಾಜಿ, ಉಮೇಶ ಭಟ್ಟ ಸೋಮಯಾಜಿ, ದಾಮೋಧರ ಭಟ್ಟ ಅವರಿಂದ ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು. ದೇವರಿಗೆ ಪುಷ್ಪಾರ್ಚನೆ, ಶ್ರೀರಾಮ ತಾರಕ ಮಂತ್ರಿ, ರಾಮರಕ್ಷಾಸ್ತ್ರೋತ್ರ ಪಠಿಸಲಾಯಿತು.ಸಂಜೆ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಪಠಣ, 1008 ದೀಪೋತ್ಸವ, ಪಲ್ಲಕ್ಕಿ ಉತ್ಸವ, ಗಣ್ಯರಿಗೆ ಸನ್ಮಾನ, ಮಹಾ ಪ್ರಸಾದ ವಿತರಣೆ ನಡೆಯಿತು.
ಮೆರವಣಿಗೆಗೆ ತಡೆ:ನಗರದ ಬಾಲಾಜಿ ಮಂದಿರ ಹಾಗೂ ಮಾರ್ವಾಡಿ ಸಮಾಜದ ವತಿಯಿಂದ ನಗರದಲ್ಲಿ ಶ್ರೀರಾಮ ವೇಷಧಾರಿಗಳ ಮೆರವಣಿಗೆ ಆಯೋಜಿಸಲಾಗಿತ್ತು, ಅದಕ್ಕಾಗಿ ಡಿಜೆ, ರಥದ ವ್ಯವಸ್ಥೆ, ಮಹಾರಾಷ್ಟ್ರ ಬಾರ್ಸಿಯಿಂದ ಬಾಲಕರ ವಿಶೇಷ ತಾಳ ಮೇಳದ ತಂಡವನ್ನು ಕರೆಸಲಾಗಿತ್ತು. ಅದರೆ, ತಹಶೀಲ್ದಾರ ಸುದರ್ಶನ ಚೌರ, ಪಿಐ ನಟರಾಜ ಲಾಡೆ ಅವರು ಮೆರವಣಿಗೆಗೆ ಎಸ್‍ಪಿ ಅವರಿಂದ ಪರವಾನಿಗೆ ಪಡೆಯಬೇಕಾಗುತ್ತದೆ ಎಂದು ಮೆರವಣಿಗೆಗೆ ತಡೆದರು.
ಇದರಿಂದ ಆಯೋಜಕರ ಹಾಗೂ ಪೊಲೀಸರು, ಹಾಗೂ ತಹಸೀಲ್ದಾರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಹಿಳೆಯರಿಂದ ಪೂರ್ಣಕುಂಭದೊಂದಿಗೆ, ತಾಳ ಮೇಳದೊಂದಿಗೆ ಜೈಕಾರ ಹಾಕುತ್ತ, ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿಜಯಕುಮಾರ ವರ್ಮಾ, ಪುರುಷೋತ್ರಮ ಮಂತ್ರಿ, ಜ್ಯೋತಿ ಶರ್ಮಾ, ವಿಜಯಕುಮಾರ ಶರ್ಮಾ, ಸಂತೋಷ ರಾಠಿ ಸೇರಿದಂತೆ ಇತರರು ಇದ್ದರು. ಯುವಕರಿಂದ ಬೊಂದಿ ಲಾಡು, ಮಹಾಪ್ರಸಾದ ವಿತರಣೆ ನಡೆಯಿತು.ನಗರದ ಶ್ರೀರಾಮ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಆದೇಶದ ಮೇರೆಗೆ ಶ್ರೀಜ್ಯೂವಲರ್ಸ್ ವತಿಯಿಂದ 200 ಕೆ.ಜೆ., ಬೊಂದಿ ಲಾಡು ಹಂಚಲಾಯಿತು.
ವ್ಹಿ.ಪಿ.ಚೌಕನಲ್ಲಿ ಶ್ರೀರಾಮನ ದರ್ಬಾರ: ನಗರದ ವ್ಹಿ.ಪಿ.ಚೌಕನಲ್ಲಿ ಓಂ ಯುವಕ ಮಂಡಳಿ ವತಿಯಿಂದ ಶ್ರೀರಾಮ, ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ, ಹನುಮಾನ ಅವರೊಂದಿಗೆ ಸಿಂಹಾಸನ ಮೇಲೆ ಕುಳಿತು ಶ್ರೀರಾಮ ದರ್ಭಾರ ನಡೆಸುವ ವಿಶಿಷ್ಠ ಅಲಂಕಾರ ಮಾಡಲಾಯಿತು.