ಗರ್ಭ ಧರಿಸಿದ ಹಸುಗಳ ಆರೈಕೆಗೆ ಪೊಲೀಸರಿಂದ ಅಡ್ಡಿ: ಆರೋಪ

| Published : Aug 20 2025, 01:30 AM IST

ಸಾರಾಂಶ

ಗರ್ಭ ಧರಿಸಿರುವ ಹಸುಗಳನ್ನು ಜೋಪಾನವಾಗಿ ಕಾಪಾಡುವ ಸಲುವಾಗಿ ಹಸುಗಳ ಫಾರಂಗೆ ಕೊಂಡೊಯ್ಯುತ್ತಿದ್ದ ವೇಳೆ ಹಲಗೂರು ಪೊಲೀಸರು ಏಕಾಏಕಿ ವಾಹನ ಅಡ್ಡಗಟ್ಟಿ ಕಸಾಯಿಖಾನೆಗೆ ಹಸುಗಳನ್ನು ಕೊಂಡೊಯುತ್ತಿರುವುದಾಗಿ ಆರೋಪಿಸಿ ವಶಕ್ಕೆ ಪಡೆದಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ರೈತರ ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗರ್ಭ ಧರಿಸಿರುವ ಹಸುಗಳನ್ನು ಜೋಪಾನವಾಗಿ ಕಾಪಾಡುವ ಸಲುವಾಗಿ ಹಸುಗಳ ಫಾರಂಗೆ ಕೊಂಡೊಯ್ಯುತ್ತಿದ್ದ ವೇಳೆ ಹಲಗೂರು ಪೊಲೀಸರು ಏಕಾಏಕಿ ವಾಹನ ಅಡ್ಡಗಟ್ಟಿ ಕಸಾಯಿಖಾನೆಗೆ ಹಸುಗಳನ್ನು ಕೊಂಡೊಯುತ್ತಿರುವುದಾಗಿ ಆರೋಪಿಸಿ ವಶಕ್ಕೆ ಪಡೆದಿದ್ದನ್ನು ಖಂಡಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಮಂಗಲ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಮಂಗಲ ಗ್ರಾಮದ ರೈತ ರವಿ ಎಂಬುವರು ಆ.15ರಂದು ಟಾಟಾ ಏಸ್ ವಾಹನದಲ್ಲಿ ಗರ್ಭಧರಿಸಿದ್ದ ತಮ್ಮ ಹಸುಗಳನ್ನು ದೊಡ್ಡಹಾಲಹಳ್ಳಿ ಸಮೀಪದ ಹೊಡಕೆದೊಡ್ಡಿಯಲ್ಲಿರುವ ಸ್ನೇಹಿತ ಕಾಂತರಾಜು ಅವರ ಫಾರಂಗೆ ಹಸುಗಳನ್ನು ಆರೈಕೆ ಮಾಡುವ ಸಲುವಾಗಿ ಕೊಂಡೊಯ್ಯುತ್ತಿದ್ದರು.

ಅಂದು ಸುಮಾರು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಮತ್ತು ಸಿಬ್ಬಂದಿ ಹಸುಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಅದನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಸುದ್ದಿ ತಿಳಿದು ಠಾಣೆ ಬಳಿ ಹೋಗಿ ಸಬ್ ಇನ್ಸ್‌ಪೆಕ್ಟರ್‌ನ್ನು ಕೈಕಾಲು ಹಿಡಿದು ಬೇಡಿಕೊಂಡರೂ ಬಿಡದೆ ನಮ್ಮ ಮನವಿಯನ್ನು ಧಿಕ್ಕರಿಸಿ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿರುವ ಗೋಶಾಲೆಗೆ ಹಸುಗಳನ್ನು ಕಳುಹಿಸಿದ್ದಾರೆ ಎಂದು ದೂರಿದರು.

ಗರ್ಭ ಧರಿಸಿರುವ ಹಸುಗಳನ್ನು ಪ್ರತ್ಯೇಕವಾಗಿ ಇರಿಸಿ ಉಪಚಾರ ಮಾಡಬೇಕಾಗುತ್ತದೆ. ಗೋ ಶಾಲೆಯಲ್ಲಿ ಗರ್ಭಧರಿಸಿರುವ ಲಕ್ಷಾಂತರ ರು. ಮೌಲ್ಯದ ಎರಡು ಹುಸುಗಳ ಇರುವುದರಿಂದ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಸುಗಳ ಮಾಲೀಕ ರೈತ ರವಿ ಅವರಿಗೆ ಯಾವುದೇ ಸ್ಥಿರ, ಚರ ಆಸ್ತಿಗಳಿಲ್ಲ. ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಹಸುಗಳ ಆರೈಕೆಗಾಗಿ ಪ್ರತ್ಯೇಕ ಫಾರಂನಲ್ಲಿ ಇರಿಸಿ ಕರುಗಳ ಜನನದ ಬಳಿಕ ತಮ್ಮ ಊರಿಗೆ ತರುವ ನಿರ್ಧಾರದಿಂದ ಟಾಟಾ ಏಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದನ್ನು ತಪ್ಪಾಗಿ ಭಾವಿಸಿ ಅವುಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಯಾವುದೇ ವಿಚಾರಣೆ ನಡೆಸದೆ, ಏಕಾಏಕಿ ಗೋಶಾಲೆಗೆ ಬಿಟ್ಟಿರುವ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಹಸುಗಳನ್ನು ನಮಗೆ ವಾಪಸ್ಸು ಕೊಡಿಸಬೇಕು ಎಂದು ರೈತರು ಒತ್ತಾಯಿಸಿದರು.

ಮುಖಂಡರಾದ ಗುಣಶೇಖರ, ವಿಜಯಕುಮಾರ್, ಯೋಗೇಶ್‌, ಶಂಕರ, ಮಧು, ಪ್ರಕಾಶ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.