ಸಾರಾಂಶ
- ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವರ್ಷಪೂರ್ತಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಸೇವೆ ಅವಿಸ್ಮರಣೀಯ. ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಕೆಲಸದಲ್ಲಿ ತೊಡಗಿರುವುದು ಸಾಮಾನ್ಯದ ವಿಷಯವಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದರು.
ನಗರದ ರಾಮನಹಳ್ಳಿ ಪೊಲೀಸ್ ಕವಾಯಿತು ಮೈದಾನದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ಧ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಪೊಲೀಸ್ ವೃತ್ತಿಯಲ್ಲಿ ಕಾರ್ಯ ನಿರ್ವಹಿ ಸುವ ಅಧಿಕಾರಿಗಳಿಗೆ ಆತ್ಮಾಭಿಮಾನವಿದೆ. ತಮ್ಮ ತಂದೆ ಪೊಲೀಸ್ ವೃತ್ತಿಯಲ್ಲಿದ್ದವರು. ತಾವು ಪೊಲೀಸ್ ಕುಟುಂಬ ದವರೆಂದು ಹೇಳಿಕೊಳ್ಳಲು ಹೆಚ್ಚಿನ ಖುಷಿ ಇದೆ ಎಂದ ಅವರು, ಪೊಲೀಸ್ ನಿವೃತ್ತರಿಗೆ ಕುಂದುಕೊರತೆ ಆಲಿಸಿದಂತೆ, ವಿವಿಧ ಇಲಾಖೆಗಳಲ್ಲಿ ನಿವೃತ್ತರಾದವರಿಗೆ ಆಯಾ ಇಲಾಖೆ ಸ್ಪಂದಿಸಬೇಕು ಎಂದರು.ದಿನವಿಡೀ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಅಶಾಂತಿ ಉಂಟಾಗದಂತೆ ಎಚ್ಚರವಹಿಸುತ್ತಿದ್ದಾರೆ. ಈ ಕಾರಣ ದಿಂದ ಜನಸಾಮಾನ್ಯರು ನೆಮ್ಮದಿಯಿಂದ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗಿದೆ. ಸಾರ್ವಜನಿಕರು, ಪೊಲೀಸರೊಂದಿಗೆ ಉತ್ತಮ ಒಡನಾಟ ಹೊಂದಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸತ್ಯನಾರಾಯಣ್ ಮಾತನಾಡಿ, ಯಾವುದೇ ವೃತ್ತಿ ಯಲ್ಲಿ ಪ್ರೀತಿ, ಗೌರವದಿಂದ ಕೆಲಸ ಮಾಡಿದರೆ ತಾನಾಗಿಯೇ ವಿಶ್ವಾಸದ ಪ್ರಶಸ್ತಿಗಳು ಸಿಗಲಿದೆ. ಆ ನಿಟ್ಟಿನಲ್ಲಿ ತಾವು ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆಯಲ್ಲಿ ಹಲವಾರು ಪ್ರೀತಿ ಸಂಪತ್ತನ್ನು ಗಳಿಸಿಕೊಂಡು ನಿವೃತ್ತಿ ಹೊಂದಿದ್ದೇನೆ ಎಂದು ಹೇಳಿದರು.ಪ್ರಸ್ತುತ ಇಲಾಖೆಯಲ್ಲಿ ಯುವ ಪೊಲೀಸರಿಗೆ ಅನುಭವದ ಕೊರತೆ ಸಾಮಾನ್ಯ. ಹೀಗಾಗಿ ವರಿಷ್ಟಾಧಿಕಾರಿಗಳು ನಿವೃತ್ತ ಅಧಿಕಾರಿಗಳಿಂದ ಯುವ ಪೊಲೀಸರಿಗೆ ಕೋಚಿಂಗ್‌ಗೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಹಳಷ್ಟು ಉಪಯೋಗವಾಗಲಿದೆ. ಜೊತೆಗೆ ಅನುಭವದ ಕೊರತೆ ನೀಗಿಸಲು ಸಾಧ್ಯ ಎಂದು ತಿಳಿಸಿದರು.
ಇದೀಗ ನಿವೃತ್ತರಾದ ತಾವು ಕಡೂರು ಪೊಲೀಸ್ ಸಿಬ್ಬಂದಿಗೆ ಕೋಚಿಂಗ್‌ಗೆ ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ. ಹಾಗೆಯೇ ಇಲಾಖೆಗಳಲ್ಲಿ ನಿವೃತ್ತಿರಾದ ಹಲವರಲ್ಲಿ ಅನುಭವದ ಶಕ್ತಿಯಿದೆ. ಹೀಗಾಗಿ ವರಿಷ್ಠಾಧಿಕಾರಿಗಳು ಯುವ ಪೊಲೀಸ ರಿಗೆ ಬಳಸಿಕೊಂಡರೆ ಸಮಗ್ರ ತರಬೇತಿ ಕೊಟ್ಟು ಅಣಿಗೊಳಿಸಬಹುದು ಎಂದು ಮನವಿ ಮಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ವರದಿ ಮಂಡಿಸಿ, ಸಮಾಜಕ್ಕಾಗಿ ದುಡಿಯುತ್ತಿರುವ ಪೊಲೀಸರಿಗೆ ಉಚಿತ ವೈದ್ಯಕೀಯ ಸೌಲಭ್ಯ, ಕಣ್ಣಿನ ತಪಾಸಣೆ ಹಾಗೂ ಅತಿಹೆಚ್ಚು ಅಂಕಗಳಿಸಿದ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಕರ್ಯ ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಪೊಲೀಸ್ ಸಿಬ್ಬಂದಿಯ ಪಥಸಂಚಲನ ನಡೆಯಿತು. ಧ್ವಜ ದಿನಾಚರಣೆ ಪ್ರಯುಕ್ತ ವೇದಿಕೆ ಮೇಲೆ ಅಧಿಕಾರಿಗಳು ಧ್ವಜದ ಬಿಲ್ಲೆ ಬಿಡುಗಡೆಗೊಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಇದ್ದರು. 2 ಕೆಸಿಕೆಎಂ 5ಚಿಕ್ಕಮಗಳೂರಿನ ರಾಮನಹಳ್ಳಿ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬುಧವಾರ ಧ್ವಜ ದಿನಾಚರಣೆ ನಡೆಯಿತು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಂ ಅಮಟೆ, ಎಎಸ್ಪಿ ಜಯಕುಮಾರ್, ಕೆ. ಸತ್ಯನಾರಾಯಣ ಇದ್ದರು.