ಸಾರಾಂಶ
ಗದಗ: ಮೀಟರ್ ಬಡ್ಡಿ ದಂಧೆ ನಡೆಸುವವರು, ವಸೂಲಿ ಹೆಸರಿನಲ್ಲಿ ಕಿರುಕುಳ ನೀಡುವವರಿಗೆ ಭಾನುವಾರ ಬೆಳ್ಳಂಬೆಳಗ್ಗೆ ಪೊಲೀಸರು ಏಕಕಾಲಕ್ಕೆ 12 ಕಡೆ ದಾಳಿ ನಡೆಸಿ ನಗದು, ದಾಖಲೆ ಪತ್ರ ವಶಕ್ಕೆ ಪಡೆದು ಬಿಸಿ ಮುಟ್ಟಿಸಿದರು.
ಗದಗ -ಬೆಟಗೇರಿಯಲ್ಲಿ ಮೈಕ್ರೋ-ಫೈನಾನ್ಸ್ ಹಾಗೂ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆಗಳ ಮೇಲೆ ದಾಳಿ ನಡೆಸಿದ್ದಲ್ಲದೇ ಬಡ್ಡಿ ವಸೂಲಿ ಮಾಡಿಕೊಡುತ್ತಿದ್ದ ರೌಡಿಗಳನ್ನು ಒಳಗೊಂಡು ಒಟ್ಟು 9 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ವಿಶೇಷವಾಗಿ ಸಂಗಮೇಶ ದೊಡ್ಡಣ್ಣವರ ಮನೆ ಮೇಲೆ ನಡೆದ ದಾಳಿಯಲ್ಲಿ ₹ 26.50 ಲಕ್ಷ ನಗದು ಪತ್ತೆಯಾಗಿರುವುದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ. ಜತೆಗೆ ಖಾಲಿ ಚೆಕ್, ಬಾಂಡ್ ಹಾಗೂ ಇನ್ನಿತರ ದಾಖಲೆ ಪತ್ರ ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ರವಿ ಕೌಜಗೇರಿ, ಮಂಜುಳಾ ಗೋಕಾಕ ಮನೆ ಸಹಿತ ಒಟ್ಟು 12 ಕಡೆಗಳಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ಕೆಲವರು ಅನಧಿಕೃತವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿರುವುದು ಮತ್ತು ಸಾಲಗಾರರಿಗೆ ಬೆದರಿಕೆ ಒಡಿದ ಆರೋಪವು ಇದೆ.
ಅದೇ ರೀತಿ ಬಡ್ಡಿ ದಂಧೆ ವಸೂಲಿ ಮಾಡಲು ಸಹಕರಿಸುತ್ತಿದ್ದ ರೌಡಿಗಳಾದ ಮಂಜುನಾಥ ಜಾಧವ್, ಬಜರಂಗ ಜಾಧವ್, ಶಿವರಾಜ ಹಂಸನೂರು, ದರ್ಶನ್ ಕೋರೆ, ಉಮೇಶ ಸುಂಕದ, ಉದಯ ಸುಂಕದ, ಮಾರುತಿ ಮುತಗಾರ, ವಿಜಯ ಸೋಳಂಕಿ, ಶ್ಯಾಮ ಕುರಗೋಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಸಿಪಿಐಗಳಾದ ಧೀರಜ್ ಶಿಂಧೆ, ಡಿ.ಬಿ. ಪಾಟೀಲ ನೇತೃತ್ವದಲ್ಲಿ ಗದಗ ಶಹರ ಪೊಲೀಸ್ ಠಾಣೆ, ಬೆಟಗೇರಿ ಮತ್ತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.