ಕಸಾಯಿಖಾನೆ ಮೇಲೆ ಪೊಲೀಸ್‌ ದಾಳಿ

| Published : Mar 11 2025, 12:50 AM IST

ಸಾರಾಂಶ

ಕುಪ್ಪಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಕೆರೆಯ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡು ಶೆಡ್ ನಿರ್ಮಾಣ ಮಾಡಿ, ಅದರಲ್ಲಿ ಗೋವುಗಳನ್ನು ಕಡಿದು ಮಾಂಸವನ್ನು ಹೊರರಾಜ್ಯಗಳಿಗೆ ರಪ್ತು ಮಾಡಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ಗೋವುಗಳನ್ನು ಕತ್ತರಿಸಿ ಅದರಿಂದ ಬರುವ ಗಲೀಜು ನೀರನ್ನು, ರಕ್ತವನ್ನು ಕೆರೆಗೆ ಹರಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಗೋವುಗಳನ್ನು ಹತ್ಯೆ ಮಾಡಿ ಮಾಂಸ ಸಾಗಾಟ ನಡೆಸುತ್ತಿದ್ದ ಕೃತ್ಯ ಬಯಲಾಗಿದೆ.

ಗೋ ಹತ್ಯೆ ನಿಷೇಧ ಮಾಡಲಾಗಿದ್ದರೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಗೋಮಾಂಸ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಗ್ರಾಮದ ದೇವಾಲಯದ ಆಜುಬಾಜಿನ ಗ್ರಾಮಪಂಚಾಯತಿಗೆ ಸೇರಿದ ಜಾಗದಲ್ಲಿಯೇ ಈ ಕೃತ್ಯ ನಡೆಯುತ್ತಿದೆ. ಅಷ್ಠೇ ಅಲ್ಲ ಈ ಕೀಚಕ ಕೃತ್ಯಕ್ಕೆ ದೇವಾಲಯದಿಂದಲೇ ವಿದ್ಯುತ್ ಸಂಪರ್ಕ ಸಹ ಪಡೆದುಕೊಂದಿದ್ದಾರೆ.

ಪೊಲೀಸರ ದಾಳಿ, ಸ್ಥಳ ಮಹಜರು

ಕುಪ್ಪಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಕೆರೆಯ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡು ಶೆಡ್ ನಿರ್ಮಾಣ ಮಾಡಿ, ಅದರಲ್ಲಿ ಗೋವುಗಳನ್ನು ಕಡಿದು ಮಾಂಸವನ್ನು ಹೊರರಾಜ್ಯಗಳಿಗೆ ರಪ್ತು ಮಾಡಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ಗೋವುಗಳನ್ನು ಕತ್ತರಿಸಿ ಅದರಿಂದ ಬರುವ ಗಲೀಜು ನೀರನ್ನು, ರಕ್ತವನ್ನು ಕೆರೆಗೆ ಹರಿಸಲಾಗುತ್ತಿದೆ. ಇದರಿಂದ ಕೆರೆಯ ನೀರು ಸಹ ಮಲೀನವಾಗುತ್ತಿದೆ. ಸೋಮವಾರ ಮಾದ್ಯಮಗಳಿಂದ ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನಂದಿಗಿರಿಧಾಮ ಪೊಲೀಸರು ಸ್ಥಳ ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಸಾಯಿ ಖಾನೆ ಮಾಲೀಕ ಯಾರೆಂಬುದು ಪತ್ತೆಯಾಗಿಲ್ಲ.

ಕಸಾಯಿ ಖಾನೆಯಲ್ಲಿದ್ದ ಸುಮಾರು 300 ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡು, ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಂಸದ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡು, ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮಾಂಸದ ಸ್ಯಾಂಪಲ್ ಹಸುವಿನದೋ ಅಥವಾ ಎಮ್ಮೆಯದೋ ಎಂದು ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಪೊಲೀಸರು, ಕಸಾಯಿ ಖಾನೆಗೆ ಬೀಗ ಜಡಿದು ಅಲ್ಲೇ ಮೊಕ್ಕಾಂ ಹೂಡಿದ್ದಾರೆ. ಹಲವು ವರ್ಷಗಳಿಂದ ಈ ಜಾಗದಲ್ಲಿ ಅಕ್ರಮ ಕಸಾಯಿ ಖಾನೆ ನಡೆಸಲಾಗುತ್ತಿದೆ. ಈ ಅಕ್ರಮ ಗೋಮಾಂಸ ದಂಧೆ ಬಗ್ಗೆ ಸ್ಥಳೀಯರು ಪ್ರಶ್ನಿಸಲು ಮುಂದಾದರೆ ಅಂತಹವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಪೊಲೀಸ್ ಇಲಾಖೆಯ ಕೆಲವರು ಅಕ್ರಮ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ಎಂದು ಸ್ಥಳೀಯ ರು ಆರೋಪಿಸಿದ್ದಾರೆ.