ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ 210 ಮೊಬೈಲ್ ಫೋನ್‌ಗಳನ್ನು ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಇಆರ್) ಪೋರ್ಟಲ್ ಸಹಾಯದಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಾವೇರಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ 210 ಮೊಬೈಲ್ ಫೋನ್‌ಗಳನ್ನು ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಇಆರ್) ಪೋರ್ಟಲ್ ಸಹಾಯದಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ.ಜಿಲ್ಲೆಯಲ್ಲಿ ಕಳುವಾಗಿದ್ದ ಹಾಗೂ ಕಾಣೆಯಾಗಿದ್ದ ಮೊಬೈಲ್‌ಗಳ ಪತ್ತೆಗಾಗಿ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಮಹತ್ವದ ಸಾಧನೆಯಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆಯು ಒಟ್ಟು 42ಲಕ್ಷ ರು. ಮೌಲ್ಯದ 210 ಮೊಬೈಲ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು ದಕ್ಷಿಣ ಭಾರತದಲ್ಲಿಯೇ ನಿಗದಿತ ಅವಧಿಯಲ್ಲಿ ಅತೀ ಹೆಚ್ಚು ಮೊಬೈಲ್ ರಿಕವರಿ ಆದ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ. 2023ರ ಜನವರಿ 1ರಿಂದ 13 ಏಪ್ರಿಲ್ 2026ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಹಾಗೂ ಕಾಣೆಯಾಗಿರುವ ಮೊಬೈಲ್ ಪ್ರಕರಣಗಳ ಆಧಾರದ ಮೇಲೆ ಶೋಧ ಕಾರ್ಯ ನಡೆಸಲಾಯಿತು. ಈ ಅವಧಿಯಲ್ಲಿ ಕಳೆದುಹೋಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ತಾಂತ್ರಿಕ ನೆರವಿನಿಂದ ಕಾರ್ಯಾಚರಣೆ..ಮೊಬೈಲ್ ಪತ್ತೆಗೆ ಡಿಒಟಿ ಸಹಯೋಗದಲ್ಲಿ ಸಿಇಐಆರ್ ಪೋರ್ಟಲ್‌ನ್ನು ಬಳಸಲಾಗಿದೆ. ಈ ತಾಂತ್ರಿಕ ವ್ಯವಸ್ಥೆಯ ಮೂಲಕ ಕಳುವಾದ ಪೋನ್‌ಗಳ ಐಎಂಇಐ ಸಂಖ್ಯೆಗಳನ್ನು ಟ್ರ್ಯಾಕ್ ಮಾಡಿ, ಅವುಗಳನ್ನು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದ್ದು, ತಂತ್ರಜ್ಞಾನ ಬಳಕೆಯಿಂದ ಅಪರಾಧ ನಿಯಂತ್ರಣ ಸಾಧ್ಯವೆಂಬುದಕ್ಕೆ ಇದು ಉತ್ತಮ ಉದಾಹರಣೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪತ್ತೆಯಾದ ಮೊಬೈಲ್‌ಗಳನ್ನು 13 ಏಪ್ರಿಲ್ 2026ರಂದು ಸಂಬಂಧಿಸಿದ ಮಾಲೀಕರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಹಲವು ಜನರು ತಮ್ಮ ಕಳೆದುಹೋದ ಮೊಬೈಲ್‌ಗಳನ್ನು ಮತ್ತೆ ಪಡೆಯುತ್ತಿರುವುದರಿಂದ ಸಂತೋಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಮೊಬೈಲ್ ಕಳುವಾದ ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಇIಖ ಪೋರ್ಟಲ್‌ನಲ್ಲಿ ಮಾಹಿತಿ ನೀಡುವಂತೆ ಸಲಹೆ ನೀಡಿದೆ. ಇದರಿಂದ ಮೊಬೈಲ್‌ಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜನ ನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರು ಮೊಬೈಲ್ ಮತ್ತಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕು. ಒಂದೊಮ್ಮೆ ಕಳುವಾದರೆ, ತಡಮಾಡದೆ ಕೂಡಲೇ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ದೂರು ನೀಡಲು ವಿಳಂಬ ಮಾಡಬಾರದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.