₹3.77 ಕೋಟಿಯ ವಿವಿಧ ಸ್ವತ್ತು ಮರಳಿಸಿದ ಪೊಲೀಸರು

| Published : Dec 18 2024, 12:47 AM IST

ಸಾರಾಂಶ

ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿದಂತೆ ₹3.77 ಕೋಟಿ ಮೊತ್ತದ ವಿವಿಧ ಸ್ವತ್ತುಗಳನ್ನು ಪೊಲೀಸ್ ಇಲಾಖೆ ವತಿಯಿಂದ ವಾರಸುದಾರರಿಗೆ ಮತ್ತೆ ಮರಳಿಸಲಾಯಿತು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಜಿ.ಕೆ. ಮಿಥುನ್‌ಕುಮಾರ್ ವಾರಸುದಾರರಿಗೆ ಮರಳಿಸಿದರು. ಕಳೆದುಕೊಂಡ ಸ್ವತ್ತುಗಳು ಕೈ ಸೇರಿದ್ದರಿಂದ ವಾರಸುದಾರರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದೆರೆಡು ವರ್ಷಗಳಲ್ಲಿ 298 ಪ್ರಕರಣ ಬೇಧಿಸಲಾಗಿದೆ: ಎಸ್ಪಿ ಮಿಥುನ್‌ಕುಮಾರ್

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿದಂತೆ ₹3.77 ಕೋಟಿ ಮೊತ್ತದ ವಿವಿಧ ಸ್ವತ್ತುಗಳನ್ನು ಪೊಲೀಸ್ ಇಲಾಖೆ ವತಿಯಿಂದ ವಾರಸುದಾರರಿಗೆ ಮತ್ತೆ ಮರಳಿಸಲಾಯಿತು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಜಿ.ಕೆ. ಮಿಥುನ್‌ಕುಮಾರ್ ವಾರಸುದಾರರಿಗೆ ಮರಳಿಸಿದರು. ಕಳೆದುಕೊಂಡ ಸ್ವತ್ತುಗಳು ಕೈ ಸೇರಿದ್ದರಿಂದ ವಾರಸುದಾರರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.ಸ್ವತ್ತುಗಳ ಪತ್ತೆ ಮಾಡಿ ತಮಗೆ ನೆರವಾದ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳಿಗೂ ಸ್ವತ್ತುಗಳ ವಾರಸುದಾರರು ವಂದಿಸಿದರು. ಈ ಕಾರ್ಯಕ್ರಮಕ್ಕೆ ಎಎಸ್ಪಿ ಜಿ.ಎ. ಕಾರಿಯಪ್ಪ, ಡಿವೈಎಸ್ಪಿಗಳಾದ ಗೋಪಾಲಕೃಷ್ಣ ಟಿ. ನಾಯಕ್, ಕೇಶವ್, ಬಾಬು ಆಂಜಿನಪ್ಪ, ಎಂ. ಸುರೇಶ್, ನಾಗರಾಜ್, ಕೃಷ್ಣಮೂರ್ತಿ ಸಾಕ್ಷಿಯಾದರು.ಕಳೆದೊಂದು ವರ್ಷದಲ್ಲಿ (2024) ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 244 ಹಾಗೂ ಹಿಂದಿನ ವರ್ಷದ 54 ಸೇರಿ ಒಟ್ಟು 298 ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಎಸ್ಪಿ ಜಿ.ಕೆ. ಮಿಥುನ್‌ಕುಮಾರ್ ಮಾಹಿತಿ ನೀಡಿದರು.2024ರಲ್ಲಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 2 ಲಾಭಕ್ಕಾಗಿ ಕೊಲೆ, 3 ದರೋಡೆ, 19 ಸುಲಿಗೆ, ನಾಲ್ಕು ಸರಗಳ್ಳತನ, 51 ಕನ್ನಕಳವು, 14 ಮನೆಗಳ್ಳತನ, 62 ಸಾಮಾನ್ಯ ಕಳವು, ಆರು ಜಾನುವಾರು ಕಳವು, 70 ವಾಹನ ಕಳವು, 13 ವಂಚನೆ ಪ್ರಕರಣ ಸೇರಿದಂತೆ 244 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಮಾಡಿ ₹3.22 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳಲ್ಲಿ ಚಿನ್ನ-ಬೆಳ್ಳಿ ಆಭರಣ, ಮೊಬೈಲ್‌ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಕೇಬಲ್ ಒಳಗೊಂಡಿವೆ ಎಂದು ತಿಳಿಸಿದರು.ಸಾಗರ ಗ್ರಾಮಾಂತರ ಠಾಣೆ ಪ್ರಥಮ

ಅಪರಾಧ ಪ್ರಕರಣಗಳ ಬೇಧಿಸಿ ಸ್ವತ್ತುಗಳ ವಶಪಡಿಸಿಕೊಳ್ಳುವಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಶೇ 150ರಷ್ಟು ಪ್ರಕರಣ ಬೇಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.ಜಿಲ್ಲೆಯ ಉಳಿದ ಪೊಲೀಸ್ ಠಾಣೆಗಳಲ್ಲೂ ಶೇ 70 ರಿಂದ 80 ರಷ್ಟು ಪ್ರಕರಣಗಳನ್ನು ಪತ್ತೆ ಮಾಡಿ ಸ್ವತ್ತುಗಳ ವಶಪಡಿಸಿಕೊಳ್ಳಲಾಗಿದೆ. ಭದ್ರಾವತಿಯ ನ್ಯೂಟೌನ್ ಠಾಣೆ ಪೊಲೀಸರು ಕಳವು ನಡೆದ 48 ಗಂಟೆಗಳಲ್ಲಿ ₹22 ಲಕ್ಷ ಮೌಲ್ಯದ 290 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಿದ್ದಕ್ಕೆ ಎಸ್ಪಿ ಸಂಬಂಧಿಸಿದ ಅಧಿಕಾರಿಗಳ ಬೆನ್ನುತಟ್ಟಿದರು. ತೀರ್ಥಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ದೇವರ ವಿಗ್ರಹ ಗಂಟೆ ಕಳಶಗಳನ್ನು ಅಲ್ಲಿನ ಪೊಲೀಸರು ಪತ್ತೆ ಮಾಡಿರುವುದನ್ನು ಎಸ್ಪಿ ಶ್ಲಾಘಿಸಿದರು.ಶಾಸಕರ ಸಹೋದರನ ಕಾರು ಪತ್ತೆ:ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಸಹೋದರ ಶಿವಕುಮಾರ್ ಖರೀದಿಸಿದ್ದ ಎರ್ಟಿಗಾ ಕಾರನ್ನು ಸೆಕೆಂಡ್ ಹ್ಯಾಂಡ್ ವಾಹನಗಳ ಶೋರೂಂನಿಂದಲೇ ಕಳವು ಮಾಡಲಾಗಿತ್ತು. ಸಿಸಿ ಟಿವಿ ಕ್ಯಾಮೆರಾ ಮಾಹಿತಿ ಆಧರಿಸಿ ಕೋಟೆ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ತಂಡ ಪತ್ತೆ ಮಾಡಿದೆ. ತುಂಗಾ ನಗರ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ತಂಡ ಕಳವು ಪ್ರಕರಣ ದಾಖಲಿಸಿದ ಎರಡು ದಿನಗಳಲ್ಲಿ ಸ್ವತ್ತು ಪತ್ತೆ ಮಾಡಿಕೊಟ್ಟಿತು ಎಂದು ಎಸ್ಪಿ ಎದುರು ಮಹಿಳೆಯೊಬ್ಬರು ಖುಷಿ ಹಂಚಿಕೊಂಡರು.

ಕೊಡದಲ್ಲಿ ಬಂಗಾರ ಇಟ್ಟು ಪೂಜೆ ಮಾಡಿಸಿದರೆ ನಿಧಿ ಸಿಗುತ್ತದೆ ಎಂದು ನಂಬಿಸಿ ₹5 ಲಕ್ಷ ಮೌಲ್ಯದ 550 ಗ್ರಾಂ ಚಿನ್ನಾಭರಣ ಪತ್ತೆ ಮಾಡಿಕೊಟ್ಟ ವಿನೋಬ ನಗರ ಠಾಣೆ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರಿಗೆ ವಾರಸುದಾರರು ಕೃತಜ್ಞತೆ ಸಲ್ಲಿಸಿದರು.ಬಸ್ ನಿಲ್ದಾಣ 16, ಮೆಗ್ಗಾನ್ ಅಸ್ಪತ್ರೆಯ 10 ಪ್ರಕರಣ ಪತ್ತೆ:ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿರುವ 31 ಕಳ್ಳತನ ಪ್ರಕರಣಗಳಲ್ಲಿ ₹57.47 ಲಕ್ಷ ಮೌಲ್ಯದ ಸ್ವತ್ತುಗಳ ಪೈಕಿ 16 ಪ್ರಕರಣಗಳನ್ನು ಪತ್ತೆ ಮಾಡಿರುವ ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ರವಿ ಪಾಟೀಲ ನೇತೃತ್ವದ ತಂಡ ₹20.47 ಲಕ್ಷ ಮೌಲ್ಯದ ವಸ್ತುಗಳ ವಶಪಡಿಸಿಕೊಂಡಿದೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಳವು ಆಗಿದ್ದ 11 ಬೈಕ್ ಕಳ್ಳತನ ಪ್ರಕರಣಗಳಲ್ಲಿ ನಾಲ್ಕು ಪತ್ತೆಯಾಗಿವೆ ಎಂದು ಎಸ್ಪಿ ವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಎಸ್ಪಿ ಜಿ.ಎ. ಕಾರಿಯಪ್ಪ, ಡಿವೈಎಸ್ಪಿಗಳಾದ ಗೋಪಾಲಕೃಷ್ಣ ಟಿ. ನಾಯಕ್, ಕೇಶವ್, ಬಾಬು ಆಂಜಿನಪ್ಪ, ಎಂ. ಸುರೇಶ್, ನಾಗರಾಜ್, ಕೃಷ್ಣಮೂರ್ತಿ,ಇನ್ಸ್‌ಫೆಕ್ಟರ್‌ಳಾದ ಕೆ.ಟಿ ಗುರುರಾಜ್, ಹರೀಶ್ ಪಾಟೀಲ್ ಸೇರಿದಂತೆ ಹಲವರಿದ್ದರು.