ಸಾರಾಂಶ
ರಂಗೂಪುರ ಶಿವಕುಮಾರ್ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹೆಲ್ಮೆಟ್ ಇಲ್ಲ, ತ್ರಿಬಲ್ ರೈಡ್, ಕುಡಿದು ಓಡಿಸಿದ ಎಂದು ಪೊಲೀಸರು ದಂಡ, ಕೇಸು ಹಾಕುವ ಕೆಲಸ ಅಲ್ಲಲ್ಲಿ ಮಾಡುತ್ತಿದ್ದಾರೆ. ಆದರೆ ಗುಜರಿಗೆ ಸೇರಬೇಕಾದ ವಾಹನಗಳ ಹೊಗೆ ‘ಹೊಗೆ ಬಂಡಿ’ಯಂತೆ ಉಗುಳುತ್ತಿದ್ದರೂ, ಪೊಲೀಸ್ ಹಾಗೂ ಆರ್‌ಟಿಒ ಇಲಾಖೆ ಮಾತ್ರ ಕೈಚೆಲ್ಲಿ ಕುಳಿತಿವೆ.ಒಂದೆಡೆ ಫಿಟ್ನೆಸ್ ಇಲ್ಲದ ವಾಹನಗಳ ಸಂಚಾರ, ಮತ್ತೊಂದೆಡೆ ಓವರ್ ಲೋಡ್ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳ ಸಾಗಾಣಿಕೆ ತಡೆಗೂ ಆರ್‌ಟಿಒ ಅಧಿಕಾರಿಗಳು ಮುಂದಾಗಿಲ್ಲ. ಇದನ್ನು ಗಮನಿಸಿದರೆ ಆರ್‌ಟಿಒ ಅಧಿಕಾರಿಗಳ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗುಂಡ್ಲುಪೇಟೆ-ಹಿರೀಕಾಟಿ ತನಕ ಮತ್ತು ಗುಂಡ್ಲುಪೇಟೆ-ತೆರಕಣಾಂಬಿ ಬಳಿಯ ಕ್ವಾರಿಯಿಂದ ಕ್ರಷರ್‌ಗೆ, ಕ್ರಷರ್‌ನಿಂದ ನಗರ ಪ್ರದೇಶಗಳಿಗೆ ತೆರಳುವ ಹಳೆಯ ಟಿಪ್ಪರ್‌ಗಳಲ್ಲಿ ಅಧಿಕ ವಾಯು ಮಾಲಿನ್ಯ ಆಗುತ್ತಿದೆ. ಆರ್‌ಟಿಒ ಅಧಿಕಾರಿಗಳು ಫೀಲ್ಡೀಗಿಳಿಯದ ಕಾರಣ ಟಿಪ್ಪರ್ ಹಾಗೂ ಹಳೆಯ ವಾಹನಗಳ ಆರ್ಭಟ ಹೆಚ್ಚಿವೆ.
ಹೊಗೆ ಉಗುಳುವುದು ಕೇವಲ ಟಿಪ್ಪರ್‌ಗಳಲ್ಲ ಹಳೆಯ ಗೂಡ್ಸ್ ಮತ್ತು ಪ್ಯಾಸೆಂಜರ್ ಆಟೋ, ಗೂಡ್ಸ್, ಬೈಕ್, ಟೆಂಪೋ, ಲಾರಿಗಳು ಹೊಗೆ ಉಗುಳಿಕೊಂಡು ವಾಯು ಮಾಲಿನ್ಯ ಮಾಡುತ್ತಿವೆ. ಆದರೆ ಪೊಲೀಸರು ಹೊಗೆ ಉಗುಳುವ ವಾಹನಗಳ ಸೀಜ್ ಮಾಡಿ ಕೇಸು ಹಾಕಿದರೆ ಹೊಗೆ ಉಗುಳುವುದು ಕಡಿಮೆ ಆಗುತ್ತದೆ. ಟಿಪ್ಪರ್‌ಗಳಲ್ಲಿ ಬೊಡ್ರೇಸ್ (ಬಳಿ ಕಲ್ಲು) ಹಾಗೂ ಕ್ರಷರ್ ಉತ್ಪನ್ನಗಳ ಸಾಗಾಣಿಕೆಗೆ ಸ್ಥಳೀಯ ಪೊಲೀಸರ ಮೌಖಿಕ ಅನುಮತಿ ಪಡೆದು ಓವರ್ ಲೋಡ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ, ಟಿಪ್ಪರ್‌ಗಳ ನಂಬರ್ ಪ್ಲೇಟ್ ಇರಲ್ಲ, ನಂಬರ್ ಪ್ಲೇಟ್ ಇದ್ರೂ ನಂಬರ್ ಇರಲ್ಲ ಆದರೂ ಟಿಪ್ಪರ್‌ಗಳ ತಪಾಸಣೆ ನಡೆಸುವುದಿಲ್ಲ.ಪೊಲೀಸರು ಮೌನ:
ಗುಂಡ್ಲುಪೇಟೆ ಹಾಗೂ ಬೇಗೂರು ಸುತ್ತ ಮುತ್ತಲಿನ ಕ್ರಷರ್‌ಗಳಿಂದ ಮೈಸೂರು ಹಾಗೂ ಚಾಮರಾಜನಗರ ಕಡೆಗೆ ಎಂಸ್ಯಾಂಡ್, ಜಲ್ಲಿ ಇನ್ನಿತರ ಉತ್ಪನ್ನಗಳನ್ನು ಟಿಪ್ಪರ್‌ಗಳು ೩೦ ರಿಂದ ೪೦ ಟನ್ ಹಾಗೂ ಕ್ವಾರಿಯಿಂದ ಕಲ್ಲು ಸಾಗಾಣಿಕೆ ಅದು ಬೇಗೂರು, ತೆರಕಣಾಂಬಿ ಪೊಲೀಸ್ ಠಾಣೆ ಮುಂದೆಯೇ ಸಂಚರಿಸುತ್ತಿವೆ. ಗುಂಡ್ಲುಪೇಟೆ ಪಟ್ಟಣದ ಮೂಲಕ ಓವರ್ ಲೋಡ್ ಕಲ್ಲು, ಕ್ರಷರ್ ಉತ್ಪನ್ನಗಳನ್ನು ತುಂಬಿಕೊಂಡು ಪೊಲೀಸರ ಎದುರೇ ಟಿಪ್ಪರ್ ಸಂಚರಿಸಿದರೂ ಸ್ಥಳೀಯ ಪೊಲೀಸ್ ಸಿಬ್ಬಂದಿ ತಡೆದು ಕೇಳಲು ಅವಕಾಶವಿಲ್ಲ. ಅಧಿಕಾರಿಗಳು ಕೂಡ ಕೇಳುತ್ತಿಲ್ಲ. ಗುಂಡ್ಲುಪೇಟೆ ಪಟ್ಟಣದ ಮಾರ್ಗ ಹಾಗೂ ಬೇಗೂರು, ತೆರಕಣಾಂಬಿ ಠಾಣೆಯ ಮುಂದೆಯೇ ಓವರ್ ತುಂಬಿದ ಟಿಪ್ಪರ್ ಸಂಚರಿಸುವ ಬಗ್ಗೆ ಎಸ್ಪಿ ಗಮನಕ್ಕೆ ಸಾರ್ವಜನಿಕರು ತಂದರೂ ಯಾವುದೇ ಕ್ರಮ ಆಗಿಲ್ಲ ಎಂಬ ಮಾತಿದೆ.ಠಾಣೆ ಮುಂದೆ ಸಿಸಿ ಕ್ಯಾಮೆರಾಹಾಕಿದರೆ ಸತ್ಯ ಬಹಿರಂಗ!ಬೇಗೂರು ಹಾಗೂ ತೆರಕಣಾಂಬಿ ಠಾಣೆಯ ಮುಂದೆ ಮತ್ತು ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಹಾಕಿದರೆ ಸ್ಥಳೀಯ ಪೊಲೀಸರ ಬಣ್ಣ ಬಯಲಾಗಲಿದೆ. ಟಿಪ್ಪರ್‌ಗಳಲ್ಲಿ ಮಿತಿ ಮೀರಿದ ಭಾರ ಹಾಕಿಕೊಂಡು ಸಂಚರಿಸುತ್ತಿವೆ. ಇದನ್ನು ತಡೆಯಲು ಪೊಲೀಸರಿಂದ ಆಗದ ಕಾರಣ ಜಿಲ್ಲಾಡಳಿತ ಎಚ್ಚೆತ್ತು ಠಾಣೆ ಮುಂದೆ ಹಾಗೂ ಗುಂಡ್ಲುಪೇಟೆ ಪಟ್ಟಣದ ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಹಾಕಲು ಮುಂದಾಗಲಿ ಎಂದು ಪುರಸಭೆ ಮಾಜಿ ಸದಸ್ಯ ಬಿ.ಎಂ. ಸುರೇಶ್ ಒತ್ತಾಯಿಸಿದ್ದಾರೆ.