ಹೊಸಪೇಟೆ: ಪೊಲೀಸರ ಶೌರ್ಯ, ತ್ಯಾಗ ಮತ್ತು ಸಾರ್ವಜನಿಕರು ಅವರ ಮೇಲಿಟ್ಟ ನಂಬಿಕೆಯ ಪ್ರತೀಕ ದಿನವಾಗಿದೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಮ್ ಪಾಷಾ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪೊಲೀಸರು ಸರ್ಕಾರದ ಅವಿಭಾಜ್ಯ ಅಂಗವಾಗಿ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಈ ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಕೆಲಸದ ಅವಧಿಯಲ್ಲಿ ಎಷ್ಟೇ ಒತ್ತಡಗಳಿದ್ದರೂ ಅದನ್ನು ಮನೆಗೆ ಕೊಂಡೊಯ್ಯಬಾರದು. ಕುಟುಂಬದವರ ಮೇಲೆ ಒತ್ತಡ ಹೇರದೇ ಸಾಮಾಜಿಕವಾಗಿ ಆರೋಗ್ಯಕರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶ್ರೀಹರಿ ಬಾಬು, ಸಂತೋಷ್ ಚೌವ್ಹಾಣ್, ಕೋದಂಡ ಪಾಣಿ ಮೂವರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ದೊರೆತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1.25ಲಕ್ಷ, ಅಧಿಕಾರಿ, ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಕನ್ನಡಕ ಖರೀದಿಗಾಗಿ ₹71,540 ಹಾಗೂ 4 ಜನರಿಗೆ ಮರಣೋತ್ತರ ಸಹಾಯಧನವಾಗಿ ₹60 ಸಾವಿರ ಹಾಗೂ 21 ವಿವಿಧ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸನ್ಮಾನಕ್ಕಾಗಿ ₹1.05 ಲಕ್ಷ ಸೇರಿ ₹12.61ಲಕ್ಷ ಧನಸಹಾಯ ನೀಡಲಾಗಿದೆ ಎಂದರು.


ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ವಿಜಯನಗರ ಜಿಲ್ಲಾ ಪೊಲೀಸ್ ಘಟಕವು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಪ್ರಗತಿ ವರದಿ ಬಿಡುಗಡೆಯಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ 2025ರ ಏಪ್ರಿಲ್ 1ರಿಂದ ಈವರೆಗೆ 32 ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅವರ ಕುಟುಂಬದವರು ಆರೋಗ್ಯ ಭಾಗ್ಯ ಯೋಜನೆಯಡಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ನಿವೃತ್ತ ಸಿಬ್ಬಂದಿಗೆ ಒಟ್ಟು ₹2.36 ಲಕ್ಷ ಧನಸಹಾಯ ನೀಡಲಾಗಿದೆ ಎಂದು ಅವರು ಹೇಳಿದರು.

ಧ್ವಜ ಮಾರಾಟದಿಂದ ₹26.82 ಲಕ್ಷ ನಿಧಿ ಸಂಗ್ರಹ:

2025ರ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಧ್ವಜ ಮಾರಾಟದಿಂದ 26,82,600 ರು. ನಿಧಿ ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ಶೇ.50 ಅಂದರೆ 13,41,300 ರು. ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಹಾಗೂ ಶೇ.50 ಅಂದರೆ 13,41,300 ರು.ನ್ನು ಸಮಾನವಾಗಿ ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಇದರಿಂದ ನಿವೃತ್ತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ವೈದ್ಯಕೀಯ ಸಹಾಯ ಮಾಡಲು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಇಲಾಖೆಯ 6 ತುಕಡಿಗಳಿಂದ ಆಕರ್ಷಕ ಪೆರೇಡ್ ನಡೆಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್ ಸ್ವಾಗತಿಸಿದರು. ಪೊಲೀಸ್ ಉಪಾಧೀಕ್ಷಕ ಡಾ.ಟಿ. ಮಂಜುನಾಥ್ ವಂದಿಸಿದರು.

ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.